ಕಡಬ: ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯಲ್ಲಿರುವ ಕಡಬ ತಾಲೂಕಿನ ಬಲ್ಯ ಶ್ರೀ ಉಮಾಮಹೇಶ್ವರೀ ದೇವಸ್ಥಾನದಿಂದ ಒಡವೆ ಹಾಗೂ ಸಿಸಿ ಕ್ಯಾಮರಾ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ.
ದೇವಸ್ಥಾನದ ಅರ್ಚಕ ರವಿಪ್ರಸಾದ್ ಭಟ್ ಅವರು ಬೆಳಗ್ಗೆ ದೇವಸ್ಥಾನಕ್ಕೆ ಬಂದು ಬಾಗಿಲು ತೆರೆಯಲು ಮುಂದಾದಾಗ ದೇವಸ್ಥಾನದ ಮುಖ್ಯ ಬಾಗಿಲಿನ ಚಿಲಕವನ್ನು ಹಾನಿ ಮಾಡಿರುವುದು ಕಂಡು ಬಂದಿತ್ತು.
ಬಾಗಿಲು ಸರಿಸಿ ಪರಿಶೀಲಿಸಲಾಗಿ ದೇವರ ಮೂರ್ತಿಗೆ ಹಾಕಲಾಗಿದ್ದ 35000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳನ್ನು ಹಾಗೂ ದೇವಸ್ಥಾನಕ್ಕೆ ಅಳವಡಿಸಿದ ಅಂದಾಜು 36,000 ರೂ. ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ,ಹಾರ್ಡ್‌ಡಿಸ್ಕ್ ಹಾಗೂ ಟಿವಿ ಮಾನಿಟರ್ ಅನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ರವಿಪ್ರಸಾದ್ ಭಟ್ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























