ಮಂಗಳೂರು : ರಾಜ್ಯದಲ್ಲಿನ ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಬೇರು ಸಮೇತ ಕೀಳುತ್ತೇವೆ. ಮಂಗಳೂರನ್ನು ಡ್ರಗ್ಸ್ ಫ್ರೀ ನಗರವನ್ನಾಗಿ ಮಾಡುತ್ತೇವೆ ಎಂದು ಇತ್ತೀಚಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದರು. ಈ ಕುರಿತು ಪೊಲೀಸ್ ಇಲಾಖೆಗೆ ಸೂಚನೆ ಕೂಡ ನೀಡಿದ್ದರು. ಗೃಹ ಸಚಿವರ ಸೂಚನೆ ಬೆನ್ನಲ್ಲೇ ಡ್ರಗ್ಸ್ ಮಾಫಿಯಾ ವಿರುದ್ಧ ಮಂಗಳೂರು ಪೊಲೀಸರು ಸಮರ ಸಾರಿದ್ದಾರೆ. ಪೊಲೀಸರು 26 ದಿನಗಳ ಅಂತರದಲ್ಲೇ 40 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ನಿಷೇಧಿತ ಎಮ್ಡಿಎಮ್ಎ ಡ್ರಗ್ ಪಾಲು ಹೆಚ್ಚಾಗಿದೆ.
ಹಾಗೇ ಪೊಲೀಸರು ಹತ್ತು ಪ್ರಕರಣದಲ್ಲಿ ಒಟ್ಟು 22 ಜನ ಪೆಡ್ಲರ್ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬೆಂಗಳೂರಿನಿಂದ ಎಮ್ಡಿಎಮ್ಎ ಡ್ರಗ್ ಖರೀದಿಸಿ ತರುತ್ತಿದ್ದರು. ಬೆಂಗಳೂರಿನಿಂದ ತಂದು ಕರಾವಳಿ, ಕೇರಳ ಭಾಗದಲ್ಲಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಡ್ರಗ್ಸ್ ಜಾಲದ ಮೂಲ ಬೆನ್ನತ್ತಿದ್ದು, ಕಿಂಗ್ ಪಿನ್ಗಳ ಪತ್ತೆಗೆ ಬಲೆ ಬೀಸಿದ್ದಾರೆ.

























