ಬೆಳ್ತಂಗಡಿ : 11 ವರ್ಷಗಳ ಹಿಂದೆ ನಡೆದ ಧರ್ಮಸ್ಥಳದ ಪಾಂಗಳ ನಿವಾಸಿ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷ ನಾಗನ ಗೌಡ ಸೋಮವಾರ ಸೌಜನ್ಯಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅನ್ಯಾಯಕ್ಕೆ ಈಡಾದ ಕುಟುಂಬದ ಪರವಾಗಿ ನಿಲ್ಲುವೆವು. ಅನ್ಯಾಯಕ್ಕೊಳಗಾದವರ ಪರವಾಗಿ ಆಯೋಗದಿಂದ ಯಾವೆಲ್ಲ ರೀತಿ ಕಾನೂನು ರೀತಿ ಮುಂದುವರಿಯಲು ಸಾಧ್ಯವಿದೆಯೋ ಎಂಬುದನ್ನು ಎಲ್ಲ ಆಯಾಮಗಳಡಿ ಪರಿಶೀಲಿಸಲಾಗುವುದು. ಬಳಿಕ ಸರಕಾರದ ಹಾಗೂ ಸಿಎಂ ಗಮನಕ್ಕೆ ತಂದು ಮನವರಿಕೆ ಮಾಡಲಿದ್ದೇವೆ ಎಂದರು.

ಸೌಜನ್ಯಾಳ ಸಹೋದರ ಹಾಗೂ ಸಹೋದರಿಯರಲ್ಲಿ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಶಿಫಾರಸು ಮಾಡಲಾಗುವುದು ಎಂದರು.

ಸಿಡಿಪಿಒ ಪ್ರಿಯಾ ಆ್ಯಗ್ನೆಸ್, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ, ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.




























