ಬೆಂಗಳೂರು : ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿತು. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು.
ಇಸ್ರೋ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು.
ಇಂದು ಭಾರತಕ್ಕೆ ಐತಿಹಾಸಿಕ ದಿನ. ಈ ಹೆಮ್ಮೆಯ ದಿನಕ್ಕಾಗಿ ಇಡೀ ದೇಶವೇ ಕಾಯುತ್ತಿತ್ತು. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಇಡೀ ಭಾರತ ಪ್ರಾರ್ಥನೆ ಮಾಡಿತ್ತು. ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ.
ಇದುವರೆಗೂ ಚಂದ್ರನ ಅಂಗಳಕ್ಕೆ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ರೋವರ್ ಕಳುಹಿಸಿತ್ತು. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಿದೆ.
ಇನ್ನು, ವಿದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಬೆಂಗಳೂರಿನಲ್ಲಿರೋ ಇಸ್ರೋ ಕೇಂದ್ರಕ್ಕೂ ಹಲವು ಗಣ್ಯರು ಆಗಮಿಸಿ ವೀಕ್ಷಣೆ ಮಾಡುತ್ತಿದ್ದಾರೆ. ಇಸ್ರೋ ಸಂಸ್ಥೆಯ ಕಾರ್ಯಕ್ಕೆ ಇಡೀ ದೇಶವೇ ಹೆಮ್ಮೆಪಟ್ಟಿದೆ.
ವಿಕ್ರಮ್ ಲ್ಯಾಂಡರ್ ಚಂದ್ರನಿಂದ 2.1 ಕಿ.ಮೀ ದೂರದಲ್ಲಿದ್ದಾಗಲೇ ಎಲ್ಲವೂ ಸಾಮಾನ್ಯವಾಗಿತ್ತು. ಆನಂತರ ಕೆಲವು ಕಾಲ ಲ್ಯಾಂಡರ್ ಹಾಗೂ ಭೂಮಿ ನಡುವೆ ಇದ್ದ ಸಂಪರ್ಕ ಕಡಿತಗೊಂಡಿತ್ತು. ಕೊನೆಗೂ ಲ್ಯಾಂಡರ್ ಕಾಣಿಸಿದ ಬಳಿಕ ಯೋಜನೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಾರೆ.
ಲ್ಯಾಂಡ್ ಆದ ಬಳಿಕ ಮುಂದೇನು..?
ವಿಕ್ರಮ್ ಲ್ಯಾಂಡರ್ ತನ್ನಲ್ಲಿರೋ ಕ್ಯಾಮೆರಾಗಳ ಮೂಲಕ ಪ್ರಗ್ಯಾನ್ ರೋವರ್ ಚಿತ್ರಗಳನ್ನು ತೆಗೆಯುವ ಮೂಲಕ ಮೊದಲ ಸೆಲ್ಫಿಗಳನ್ನು ಭಾರತದ ನೆಲಕ್ಕೆ ಕಳುಹಿಸಲಿದೆ. ಇದು ಇಡೀ ದೇಶಕ್ಕೆ ಅತ್ಯಂತ ದೊಡ್ಡ ಘಳಿಗೆಯಾಗಲಿದೆ. ಇದರ ಬಳಿಕ ಯೋಜನೆಯ ನೈಜ ಉದ್ದೇಶ ಹಾಗೂ ವಿಜ್ಞಾನ ಕಾರ್ಯರೂಪಕ್ಕೆ ಬರುತ್ತದೆ.



























