ಪುತ್ತೂರು : ಆರು ವರ್ಷಗಳ ಹಿಂದಿನ ಪ್ರಕರಣದ ಆರೋಪಿ ಬೆಳ್ತಂಗಡಿ ತಾಲೂಕು ಮಚ್ಚಿನ ಗ್ರಾಮದ ಕುದ್ರಡ್ಕ ನಿವಾಸಿ ಪ್ರಶಾಂತ್ ಯಾನೆ ನಾರಾಯಣ ಎಂಬವರನ್ನು ಜಿಲ್ಲಾ ನ್ಯಾಯಾಲಯವು ನಿರಪರಾಧಿ ಎಂದು ಬಿಡುಗಡೆಗೊಳಿಸಿದೆ.
ದ 26.12.2017 ರಂದು ಬೆಳ್ತಂಗಡಿ ತಾಲೂಕು, ಮಚ್ಚಿನ ಗ್ರಾಮದ ಕುದ್ರಡ್ಕ ಎಂಬಲ್ಲಿ ರಾತ್ರಿ ವೇಳೆಯಲ್ಲಿ ಆರೋಪಿಯನ್ನಲಾಗಿದ್ದ ಪ್ರಶಾಂತ್ ಯಾನೆ ನಾರಾಯಣ ಎಂಬವರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಕೆಯ ಮನೆಯವರು ತಿಳಿಸಿದಂತೆ ಬಾಲಕಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು.
ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 417,376(2)(o),506 ಮತ್ತು ಪೋಕ್ಸೋ ಕಾಯ್ದೆಯ ಕಲಂ 6 ರ ಅನ್ವಯದಂತೆ ಪ್ರಕರಣ ದಾಖಲಿಸಿದ್ದರು. ತದನಂತರ ತನಿಖೆ ಮುಂದುವರಿಸಿ ಆರೋಪಿ ಎನ್ನಲಾಗಿದ್ದ ಪ್ರಶಾಂತ್ ಯಾನೆ ನಾರಾಯಣ ರನ್ನು ದಸ್ತಗಿರಿ ಮಾಡಿ ತನಿಖೆ ನಡೆಸಿದ್ದರು. ನಂತರ ಪೊಲೀಸರು ಆರೋಪಿಯ ವಿರುದ್ಧ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ವೇಳೆ ಉಚ್ಚ ನ್ಯಾಯಾಲಯದ ಆದೇಶದಂತೆ, ಮಂಗಳೂರಿನ ಎರಡನೇ ಜಿಲ್ಲಾ ನ್ಯಾಯಾಲಯದಲ್ಲಿದ್ದ ಪ್ರಕರಣವು ಈ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ. ನ್ಯಾಯಾಲಯವು ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡು ಸುಮಾರು 22 ಸಾಕ್ಷಿಗಳ ಪೈಕಿ 16 ಸಾಕ್ಷಿಗಳನ್ನು ತನಿಖೆ ನಡೆಸಿತ್ತು.
ದೂರಿನ ಸಲ್ಲಿಕೆಯಲ್ಲಿನ ವಿಳಂಬ, ಬಾಲಕಿಯ ವಯಸ್ಸಿನ ಕುರಿತ ವೈರುದ್ದ್ಯ ಹೇಳಿಕೆ ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬಂದಿರುವುದಿಲ್ಲ,ಸೂಕ್ತ ವೈಜ್ಞಾನಿಕ ಸಾಕ್ಷ್ಯಧಾರ ಮತ್ತು ದಾಖಲೆಗಳ ಕೊರತೆ, ತನಿಖೆಯಲ್ಲಿನ ವಿರೋಧಾಬಾಸಗಳು, ಇವುಗಳ ಹಿನ್ನೆಯಲ್ಲಿ ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸಲು ವಿಫಲಗೊಂಡಿದೆ ಎಂದು ತೀರ್ಮಾನಿಸಿ, ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಕಾಂತರಾಜು ಎಸ್. ವಿ ರವರು ಆರೋಪಿಯನ್ನು ನಿರ್ದೋಷಿ ಎಂದು ಆದೇಶಿಸಿರುತ್ತಾರೆ.
ಆರೋಪಿ ಪರ ವಕೀಲರಾದ ಪುತ್ತೂರಿನ ಕಜೆ ಲಾ ಚೇಂಬರ್ಸ್ ಮಹೇಶ್ ಕಜೆ ಮತ್ತು ಮಂಗಳೂರಿನ ರಾಜೇಶ್ ರೈಯವರು ವಾದಿಸಿದ್ದರು.


























