ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ನಗರದ ಕೃಷ್ಣ ಮಠಕ್ಕೆ ಮಧ್ಯರಾತ್ರಿ ಭೇಟಿ ನೀಡಿ ಕೃಷ್ಣನ ದರ್ಶನ ಪಡೆದರು.


ಖಾದರ್ ಅವರು ಮಧ್ವ ಸರೋವರದಲ್ಲಿ ಕೈಕಾಲುಗಳನ್ನು ತೊಳೆದು ಬಂದು ಶ್ರೀಕೃಷ್ಣನ ದರ್ಶನ ಮಾಡಿದರು.
ಸ್ಪೀಕರ್ ಜೊತೆಗೆ ಹಲವು ಕಾಂಗ್ರೆಸ್ ನಾಯಕರು ಸಾಥ್ ನೀಡಿದರು. ಚೆನ್ನಾಗಿ ಮಳೆ ಬೆಳೆಯಾಗಿ ನಾಡಿಗೆ ಒಳಿತಾಗಲಿ ಎಂದು ಅಷ್ಟಮಿಯ ಕೃಷ್ಣನಲ್ಲಿ ಯು.ಟಿ. ಖಾದರ್ ಪ್ರಾರ್ಥಿಸಿದರು.


ಅರ್ಘ್ಯ ಪ್ರದಾನ
ಪರ್ಯಾಯ ಕೃಷ್ಣಾಪುರ ಮಠಾಧೀಶರಿಂದ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಿತು. ಅರ್ಘ್ಯ ಪ್ರದಾನದ ಮೂಲಕ ಕೃಷ್ಣದೇವರ ಹುಟ್ಟನ್ನು ಸಂಭ್ರಮಿಸುವ ಆಚರಣೆಯಿದ್ದು, ಕೃಷ್ಣದೇವರ ಗುಡಿಯಲ್ಲಿ ಮತ್ತು ಗುಡಿಯ ಎದುರಿನ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಇದಕ್ಕೆ ಪರ್ಯಾಯ ಮಠಾಧೀಶ ವಿದ್ಯಾಸಾಗರ ತೀರ್ಥರಿಗೆ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು ಸಾಥ್ ನೀಡಿದರು.
ಹಗಲಿಡೀ ಉಪವಾಸವಿದ್ದ ನೂರಾರು ಭಕ್ತರಿಂದಲೂ ಶಂಖದ ಮೂಲಕ ಹಾಲು ಹಾಗೂ ನೀರಿನ ಆರ್ಘ್ಯ ಪ್ರದಾನ ನಡೆಯಿತು. ಕೃಷ್ಣಮಠದ ತುಂಬಾ ನಿನ್ನೆ ಹಾಗೂ ಇಂದು ನಿರಂತರ ಕೃಷ್ಣ ಜಪ ನಡೆಯುತ್ತಿದೆ. ನಾಳೆ ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದ್ದು, ಮಧ್ಯಾಹ್ನದ ನಂತರ ನಡೆಯುವ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ. ಬೆಳಗ್ಗಿನಿಂದಲೇ ಸಾವಿರಾರು ಜನರಿಗೆ ಭೋಜನ ಪ್ರಸಾದ ವಿತರಣೆಯಾಗುತ್ತಿದ್ದು, ಆರ್ಘ್ಯ ಪ್ರದಾನದ ವೇಳೆ ದೇವರಿಗೆ ಸಮರ್ಪಿಸಿದ ಉಂಡೆ ಚಕ್ಕುಲಿ ವಿತರಿಸಲಾಗುತ್ತಿದೆ.


























