ಬೆಂಗಳೂರು : ಮದುವೆಯಾದ ಮೂರು ತಿಂಗಳಿಗೆ ನವ ವಿವಾಹಿತೆ ಸಾವನ್ನಪ್ಪಿರೋ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೃಷ್ಣವೇಣಿ (26) ಸಾವನ್ನಪ್ಪಿದ ನವ ವಿವಾಹಿತೆ.
ಕೃಷ್ಣವೇಣಿ ಮೂರು ತಿಂಗಳ ಹಿಂದಷ್ಟೆ ಕೋಲಾರ ಮೂಲದ ಪೃಥ್ವಿರಾಜ್ಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಎರಡು ತಿಂಗಳ ಗರ್ಭಿಣಿ ಸಹ ಆಗಿದ್ದ ಕೃಷ್ಣವೇಣಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.
ಕೃಷ್ಣವೇಣಿ ಗಂಡ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈತ ಮದುವೆಯಾದ ಎರಡು ತಿಂಗಳಿಗೆ ಕಿರಿಕ್ ಶುರು ಮಾಡಿದ್ದನಂತೆ. ಮದುವೆಯಾದ ಮೂರು ತಿಂಗಳಿಗೆ ಕೃಷ್ಣವೇಣಿಯನ್ನು ನಾಲ್ಕೈದು ಬಾರಿ ಜಗಳ ಮಾಡಿ ತವರಿಗೆ ಕಳುಹಿಸಿದ್ದ. ನಿನ್ನೆ ಕುಡಿದು ಬಂದು ಗಲಾಟೆ ಮಾಡಿ ಈತನೇ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮೃತ ಕೃಷ್ಣವೇಣಿ ಕುಟುಂಬಸ್ಥರು ಪೃಥ್ವಿರಾಜ್ ಕಿತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ಪೃಥ್ವಿರಾಜ್ನನ್ನು ಕೂಡಲೇ ಬಂಧಿಸುವಂತೆ ಕಾಡುಗೋಡಿ ಠಾಣೆ ಮುಂದೆ ಕೃಷ್ಣವೇಣಿ ಕುಟುಂಬ ಒತ್ತಾಯಿಸಿದೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

























