ಉಡುಪಿ : ಚೈತ್ರಾ ಕುಂದಾಪುರ ಮತ್ತು ತಂಡದವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಸಿಸಿಬಿ ಪೊಲೀಸರು ಉಡುಪಿ ಜಿಲ್ಲೆಯ ಹಲವು ಸ್ಥಳಗಳಿಗೆ ಭೇಟಿ ನೀಡಿ ಮಹಜರು, ರಿಕವರಿ ನಡೆಸಿದರು.
ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ ಆರೋಪಿಗಳು ಪಡೆದಿದ್ದರೆನ್ನಲಾದ 5 ಕೋಟಿ ರೂಪಾಯಿಗಳನ್ನು ಯಾವ ರೀತಿ ವಿನಿಯೋಗ ಮಾಡಿದ್ದಾರೆ ಎನ್ನುವುದರ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.
ಆರೋಪಿಗಳು ಈ ಹಣದಿಂದ ಆಸ್ತಿ-ಪಾಸ್ತಿ, ಜಮೀನು ಖರೀದಿಸಿರುವ ಶಂಕೆ ಇದ್ದು, ಈ ಹಿನ್ನೆಲೆಯಲ್ಲಿ ಬೈಂದೂರು, ಕುಂದಾಪುರ, ಉಡುಪಿ ತಾಲೂಕುಗಳಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿದರು.
ಕೆಲವು ಕಡೆ ಮಹಜರು ಮತ್ತು ರಿಕವರಿ ಮಾಡಿದರು.
ಆರೋಪಿಗಳಲ್ಲಿ ಒಬ್ಬನಾಗಿರುವ ಶ್ರೀಕಾಂತ್ ನಾಯಕ್ ನನ್ನು ಜಿಲ್ಲೆಯ ಖಾಸಗಿ ಸೊಸೈಟಿಯೊಂದಕ್ಕೆ ಕರೆದೊಯ್ದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ಸೊಸೈಟಿಯಲ್ಲಿ ಆರೋಪಿಗಳು ಹಣ ಮತ್ತು ಚಿನ್ನ ಅಡವಿರಿಸಿದ ಬಗ್ಗೆ ಆಸ್ತಿ ಪತ್ರ ಸಿಕ್ಕಿದೆ ಎಂದು ಹೇಳಲಾಗಿದೆ.

























