ಕಾಸರಗೋಡು : ಶಾಲಾ ಬಸ್ ಮತ್ತು ಆಟೋ ರಿಕ್ಷಾ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಸಮೀಪದ ಪಳ್ಳತ್ತಡ್ಕದಲ್ಲಿ ನಡೆದಿದೆ.
ಮೃತಪಟ್ಟ ನಾಲ್ವರು ಮಹಿಳೆಯರು ಒಂದೇ ಕುಟುಂಬದವಾಗಿದ್ದು, ಮೃತಪಟ್ಟವರನ್ನು ಮೊಗ್ರಾಲ್ ಪುತ್ತೂರು ನಿವಾಸಿ ಆಟೋ ಚಾಲಕ ಅಬ್ದುಲ್ ರೌಫ್ (48), ಉಸ್ಮಾನ್ ರವರ ಪತ್ನಿ ಬೀಫಾತಿಮ್ಮ (50), ಶೇಕ್ ಅಲಿರವರ ಪುತ್ರ ಬೀಫಾತಿಮ್ಮ ( 60), ಇಸ್ಮಾಯಿಲ್ ರವರ ಪತ್ನಿ ಉಮ್ಮು ಫಲಿಮಾ, ಬೆಳ್ಳೂರಿನ ಅಬ್ಬಾಸ್ ರವರ ಪತ್ನಿ ನಫೀಸಾ ಎಂದು ಗುರುತಿಸಲಾಗಿದೆ.
ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ. ಗಂಭೀರ ಗಾಯಗೊಂಡಿದ್ದ ಚಾಲಕ ರೌಫ್ ಕಾಸರಗೋಡಿನ ಆಸ್ಪತ್ರೆಯಲ್ಲಿ ಮೃತಪಟ್ಟರು.
ನಿನ್ನೆ ಸಂಜೆ ಪೆರ್ಲ ಕಡೆಗೆ ತೆರಳುತ್ತಿದ್ದ ಆಟೋ ರಿಕ್ಷಾ ಹಾಗೂ ವಿದ್ಯಾರ್ಥಿಗಳನ್ನು ಇಳಿಸಿ ಮರಳುತ್ತಿದ್ದ ಖಾಸಗಿ ಶಾಲಾ ಬಸ್ಸು ನಡುವೆ ಅಪಘಾತ ನಡೆದಿದೆ.
ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


























