ಸುಳ್ಯ : ಕೆಲ ವರುಷಗಳ ಹಿಂದೆ ನಡೆದ ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಹೈಕೋರ್ಟ್ ನಿಂದ ತೀರ್ಪಾಗಿರುವ ಆರೋಪಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಐವರು ಆರೋಪಿಗಳಿಗೆ ಇಂದು ಶಿಕ್ಷೆ ವಿಧಿಸಿ ಹೈಕೋರ್ಟ್ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
ಪ್ರೊ.ಎ.ಎಸ್. ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕಳೆದ ವಾರವಷ್ಟೇ ರದ್ದುಗೊಳಿಸಿದ್ದ ಹೈಕೋರ್ಟ್ ಅವರು ದೋಷಿಗಳೆಂದು ತೀರ್ಪು ನೀಡಿತ್ತು.
ಡಾ. ರೇಣುಕಾ ಪ್ರಸಾದ್ ಕೆ.ವಿ. ಸೇರಿದಂತೆ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಪರಿಶೀಲಿಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸೆ.27 ರಂದು ಈ ಆದೇಶ ನೀಡಿತ್ತು.
ಡಾ. ರೇಣುಕಾಪ್ರಸಾದ್ ಹಾಗೂ ಇತರೆ ಐವರು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿದ್ದ ಹೈಕೋರ್ಟ್ ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧ ಕೃತ್ಯದಲ್ಲಿ ದೋಷಿಗಳನ್ನಾಗಿ ತೀರ್ಮಾನಿಸಿತ್ತು.
ಆದರೇ ಏಳನೇ ಆರೋಪಿಯಾಗಿದ್ದ ಹೆಚ್.ಯು.ನಾಗೇಶ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಇಂದು ಕೋರ್ಟಿಗೆ ಶರಣಾಗಲು ಅಪರಾಧಿಗಳಿಗೆ ಸೂಚನೆ ನೀಡಿದ್ದ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿತ್ತು.
ಅದರಂತೆ ಅಪರಾಧಿಗಳು, ಪ್ರಕರಣದ ವಿಚಾರಣೆ ನಡೆದಿದ್ದ ಪುತ್ತೂರಿನಲ್ಲಿರುವ ಐದನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಬೇಕಿತ್ತು. ಆದರೆ ನ್ಯಾಯಾಧೀಶರು ರಜೆಯಲ್ಲಿರುವುದಿಂದ ಪ್ರಭಾರದಲ್ಲಿರುವ ಆರನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಬೇಕಾಯಿತು. ಅದರಂತೆ ಶರಣ್ ಹೊರತಾಗಿ ಇತರರು ಇಂದು ಅಪರಾಹ್ನ ಮಂಗಳೂರಿನಲ್ಲಿರುವ ಆರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಹಾಜರಾದರು.
ವೀಡಿಯೋ ಕಾನ್ಸರೆನ್ಸ್ ಮೂಲಕ ಹೈಕೋರ್ಟ್ ನ್ಯಾಯಾಧೀಶರು ಅಪರಾಧಿಗಳ ಅಹವಾಲು ಆಲಿಸಿ ಬಳಿಕ ಶಿಕ್ಷೆಯ ತೀರ್ಪು ಪ್ರಕಟಿಸಿದರು.
ಅಪರಾಧಿಗಳಾದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ಎಚ್.ಆರ್. ನಾಗೇಶ್, ವಾಮನ್ ಪೂಜಾರಿ, ಭವಾನಿಶಂಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಯಿತು.
ಇಂದು ಹಾಜರಾಗದ ಶರಣ್ ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿಲ್ಲ.
ಡಾ. ರೇಣುಕಾ ಪ್ರಸಾದ್ ಅವರಿಗೆ 10 ಲಕ್ಷ ರೂ. ದಂಡವೂ ವಿಧಿಸಲಾಗಿದ್ದು, ಅದನ್ನು ಕೊಲೆಗೀಡಾದ ರಾಮಕೃಷ್ಣ ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ.


























