ಬಂಟ್ವಾಳ : ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸವಾರಿ ಮಾಡುವಂತೆ ಸ್ಥಳೀಯರು ತಿಳಿಸಿದ್ದಾರೆ.
ಅಕ್ಕರಂಗಡಿ ಅಂದರೆ ಪಾಣೆಮಂಗಳೂರು ಕಡೆಯಿಂದ ಬರುವಾಗ ಸುಮಾರು ನಾಲ್ಕು ಪಿಲ್ಲರ್ ಗಳ ಪೈಕಿ ಬಿರುಕು ಕಾಣಿಸಿಕೊಂಡಿದೆ. ಡಾಂಬಾರು ಎದ್ದು ಹೋಗಿದೆ, ಸಣ್ಣ ಗುಂಡಿಯಾಗಿರುವುದು ಕಂಡು ಬಂದಿದೆ.
ಈ ಹಿಂದೆ ಬಿಸಿರೋಡು ಕಡೆಯಿಂದ ಬರುವ ಗೂಡಿನಬಳಿಯ ಭಾಗದಲ್ಲಿ ಸೇತುವೆ ಕುಸಿತ ಕಂಡು ಬಂದಿತ್ತು. ಹಾಗಾಗಿ ನೂತನ ಸೇತುವೆ ಆ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು.
ನೂತನ ಸೇತುವೆ ನಿರ್ಮಾಣವಾಗುವವರೆಗೆ ಈ ಸೇತುವೆಯಲ್ಲಿ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಆ ಬಳಿಕ ಕುಸಿತ ಕಂಡ ಭಾಗದಲ್ಲಿ ಇಲಾಖೆ ರಿಪೇರಿ ಕಾರ್ಯ ಮಾಡಿತ್ತು. ಇದೀಗ ಬಸ್ ಸಹಿತ ಅನೇಕ ಘನ ವಾಹನಗಳ ಸಂಚಾರ ನಡೆಸುತ್ತಿದ್ದವು.
ಭಾನುವಾರ ರಾತ್ರಿ ಗೂಡಿನ ಬಳಿ ನಿವಾಸಿ ಮಹಮ್ಮದ್ ಮತ್ತು ಅವರು ಸ್ನೇಹಿತರು ಪಾಣೆಮಂಗಳೂರು ಕಡೆಯಿಂದ ಗೂಡಿನ ಬಳಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಬಿರುಕು ಬಿಟ್ಟ ಬಗ್ಗೆ ಕಾಣಿಸಿಕೊಂಡಿದೆ. ಕೂಡಲೇ ಬಂಟ್ವಾಳ ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೆಲ ಹೊತ್ತಿನ ತನಕ ಸೇತುವೆಯಲ್ಲಿ ನಿಂತುಕೊಂಡು ವಾಹನಸವಾರರಿಗೆ ನಿಧಾನವಾಗಿ ಚಲಿಸುವಂತೆ ಕೋರಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಬಿರುಕು ಕಾಣಿಸಿಕೊಂಡಿದ್ದ ಮುಲಾರಪಟ್ನ ಸೇತುವೆ ಮುರಿದು ಬಿದ್ದಿತ್ತು. ಅದೃಷ್ಟವಶಾತ್ ಅ ಹೊತ್ತಿಗೆ ಯಾವುದೇ ವಾಹನಗಳು ಸಂಚಾರ ಮಾಡದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ನಿರ್ಲಕ್ಷ್ಯ ಮಾಡದೆ ವಾಹನ ಸವಾರರು ಎಚ್ಚರಿಕೆಯಿಂದ ಇರುವುದು ಉತ್ತಮ.


























