ಬೆಂಗಳೂರು : ತನ್ನ ಇಬ್ಬರು ಮಕ್ಕಳ ಸರಣಿ ಪ್ರೀತಿಯಿಂದ ಮನನೊಂದ ವ್ಯಕ್ತಿಯೊಬ್ಬರು ಮರ್ಯಾದೆಗೆ ಅಂಜಿ ಹಿರಿ ಮಗಳನ್ನೇ ಕೊಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕವನಾ (20) ಹತ್ಯೆಯಾದ ಯುವತಿ.
ಪ್ರೀತಿಸಿದ ಪ್ರಿಯತಮನಿಗಾಗಿ ಕಿರಿ ಮಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ಸಾಂತ್ವಾನ ಕೇಂದ್ರ ಸೇರಿದ್ದಾಳೆ. ಇತ್ತ ಹಿರಿ ಮಗಳ ಪ್ರೀತಿ ವಿಚಾರ ತಿಳಿದ ತಂದೆ, ಚಿಕ್ಕ ಮಗಳು ಮರ್ಯಾದೆ ತೆಗೆದಳು, ಇವಳು ಮರ್ಯಾದೆ ಕಳೆಯುತ್ತಾಳೆ ಅಂತ ಕೊಲೆಯೇ ಮಾಡಿದ್ದಾನೆ.
ಮಗಳು ಕವನಾಳನ್ನು ಹತ್ಯೆಗೈದ ಬಳಿಕ ಆರೋಪಿ ಮಂಜುನಾಥ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಮಂಜುನಾಥ್ ಅವರ ಕಿರಿಯ ಮಗಳು ಪ್ರೀತಿಯ ಬಲೆಗೆ ಬಿದ್ದು ಪ್ರಿಯಕರನ ಜೊತೆಗೆ ಹೋಗುವುದಾಗಿ ಕಳೆದ ಮಂಗಳವಾರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಳು. ಪ್ರೀತಿಸಿದವನ ಜೊತೆ ಹೋಗುವುದಾಗಿ ಠಾಣೆಯಲ್ಲಿ ಪಟ್ಟು ಹಿಡಿದಿದ್ದು, ಪೊಲೀಸರು ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಇದರ ಬೆನ್ನಲ್ಲೇ ಹಿರಿ ಮಗಳು ಸಹ ಪ್ರೀತಿ ಬಲೆಯಲ್ಲಿರುವ ವಿಚಾರ ತಿಳಿದಿದ್ದ ತಂದೆ ಮಂಜುನಾಥ್, ಚಿಕ್ಕ ಮಗಳು ಮರ್ಯಾದೆ ಕಳೆದಳು, ಇನ್ನು ಇವಳು ಕೂಡ ಗ್ರಾಮದಲ್ಲಿ ನಮ್ಮ ಮರ್ಯಾದೆ ಕಳೆಯುತ್ತಾಳೆ ಅಂತ ಹಿರಿ ಮಗಳನ್ನು ಕೊಲೆ ಮಾಡಿದ್ದಾನೆ.

























