ಹಾಸನ : ಪ್ರಿಯಕರನಿಂದ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರು ತಾಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ನಡೆದಿದೆ.
ಪದವಿ ವ್ಯಾಸಂಗ ಮಾಡುತ್ತಿದ್ದ ಆಶಾ (20) ಸಾವನ್ನಪ್ಪಿರುವ ವಿದ್ಯಾರ್ಥಿನಿ.

ಬೇಲೂರು ಪಟ್ಟಣದ ವೈಡಿಡಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಮಂಜುನಾಥ ಎನ್ನುವ ವಿದ್ಯಾರ್ಥಿ ಪ್ರೀತಿಯ ನೆಪವೊಡ್ಡಿ ಆಶಾಳೊಂದಿಗೆ ಸುತ್ತಾಡಿದ್ದ. ಈತನು ಆಲೂರು ತಾಲ್ಲೂಕಿನ ಕಾಟೀಹಳ್ಳಿ ಗ್ರಾಮದವನಾಗಿದ್ದಾನೆ. ಇತ್ತೀಚೆಗೆ ಬೇರೊಂದು ಹುಡುಗಿಯ ಜೊತೆ ವಿದ್ಯಾರ್ಥಿ ಸುತ್ತಾಡುತ್ತಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಬೆದರಿಕೆ ಹಾಕಿ, ಕೊಲೆ ಮಾಡುವುದಾಗಿ ಹೇಳಿದ್ದ ಎನ್ನಲಾಗಿದೆ.
ನೀನು, ನನ್ನೊಂದಿಗೆ ಸುತ್ತಾಡಿರುವ ಫೋಟೋಸ್, ಮಾಡಿದಂತಹ ಮೆಸೇಜ್‌ಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ಆರೋಪ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದ ಮನನೊಂದು ಕಾಲೇಜಿನ ಬಳಿಯೇ ವಿಷ ಸೇವಿಸಿದ್ದಳು. ತಕ್ಷಣ ಅವಳನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























