ಉಪ್ಪಿನಂಗಡಿ : ಪೆರ್ನೆಯ ಕಳೆಂಜ ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ದೇವರಿಗೆ ಸಮರ್ಪಿಸಲಾದ ಆಭರಣಗಳು ನಾಪತ್ತೆಯಾಗಿರುವುದು ಅ.15ರಂದು ಬೆಳಕಿಗೆ ಬಂದಿದ್ದು, ಈ ಬಗ್ಗೆ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಎನ್. ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಈ ದೇವಾಲಯದ ಬ್ರಹ್ಮಕಲಶಾಭಿಷೇಕ ನಡೆದಿದ್ದು, ಈ ಸಮಯದಲ್ಲಿ ದೇವರಿಗೆ ಭಕ್ತಾದಿಯೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋ ಮಾಲೆಯನ್ನು ಸಮರ್ಪಿಸಿದ್ದರು.
ಅದು ಮತ್ತು ಎರಡು ಪವನಿನ ಚಿನ್ನದ ಸರ ನಾಪತ್ತೆಯಾಗಿದೆ. ಸರಕಾರ ದೇವಾಲಯಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದ್ದು, ಅಧಿಕಾರ ಸ್ವೀಕರಿಸಿದ ಅವರು ಅ.15ರಂದು ಭಕ್ತಾದಿಗಳ ಸಮ್ಮುಖದಲ್ಲಿ ಮಹಜರು ನಡೆಸಿದಾಗ ಚಿನ್ನದ ಸರಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಚಿನ್ನದ ಸರಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿರುವ ದೇವಾಲಯದ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಅವರು, 2022ನೇ ಡಿಸೆಂಬರ್ ನಲ್ಲಿ ದೇವರಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಸುಮಾರು 3 ಮುಕ್ಕಾಲು ಪವನ್ ನ ಐದು ಎಳೆಗಳಿಂದ ಕೂಡಿದ ಜೋ ಮಾಲೆ ಮತ್ತು ಎರಡು ಪವನಿನ ಚಿನ್ನದ ಸರ ನಾಪತ್ತೆಯಾಗಿದ್ದು, ಇವುಗಳ ಅಂದಾಜು ಮೌಲ್ಯ 2,18,000 ಆಗಬಹುದು., ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ದಾಖಲೆ ಪತ್ರಗಳಿದ್ದ ಕಬ್ಬಿಣದ ಕಪಾಟನ್ನು ಕಾರ್ಯಾಲಯದಿಂದ ಕಳ್ಳತನ ಮಾಡಿ, ಅದರಲ್ಲಿದ್ದ ದಾಖಲೆ ಪತ್ರಗಳನ್ನು ನಾಶಪಡಿಸಿ ನಗದು ಹಾಗೂ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದು, ಭದ್ರತಾ ಕೊಠಡಿ ಕೀಲಿ ಕೈಯನ್ನು ಅನಧಿಕೃತವಾಗಿ ಹುಟ್ಟುಹಾಕಿದ ಖಾಸಗಿ ಟ್ರಸ್ಟ್ ಮತ್ತು ಅದರ ಪೂರಕವಾದ ಸಮಿತಿಗೆ ದೇವಾಲಯದ ಮಾಜಿ ಅಧ್ಯಕ್ಷರಾದ ರೋಹಿತಾಕ್ಷ ಬಾಣಬೆಟ್ಟು ಬೆಳಿಯೂರು ಗ್ರಾಮ, ಟ್ರಸ್ಟ್ ನ ಅಧ್ಯಕ್ಷರಾದ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಅವಿನಾಶ್ ಜೈನ್ ಪರಂಗಾಜೆ ಮತ್ತು ಸಮಿತಿಯ ಸದಸ್ಯರು ಕಾರಣರಾಗಿರುತ್ತಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























