ಬಂಟ್ವಾಳ : ಪ್ರಯಾಣಿಕರೋರ್ವರು ಚೀಲದಲ್ಲಿ ಕೋಳಿ ಮಾಂಸ ಹಿಡಿದುಕೊಂಡು ಬಸ್ ಹತ್ತಿದ ಕಾರಣಕ್ಕಾಗಿ ಆತನಿಗೆ ನಿರ್ವಾಹಕ ಅವಾಚ್ಯ ಶಬ್ದದಿಂದ ಬೈದುದಲ್ಲದೆ, ಚಾಲಕ ಸೀದಾ ಪ್ರಯಾಣಿಕರನ್ನು ಕೂರಿಸಿಕೊಂಡು ಬಸ್ ಅನ್ನು ಪೊಲೀಸ್ ಠಾಣೆಗೆ ತಂದ ಘಟನೆ ನಡೆದಿದೆ.
ಸುರೇಶ್ ಎಂಬವರು ತುಂಬೆಯಲ್ಲಿ ಸ್ಟೇಟ್ ಬ್ಯಾಂಕ್ – ಪುತ್ತೂರು ಕೆ.ಎಸ್.ಆರ್.ಟಿ.ಸಿ. ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಪಡೆಯಲು ಬಂದಾಗ ಅವರ ಕೈಯಲ್ಲಿ ಚೀಲವೊಂದ್ದಿದ್ದು, ಇದರ ಬಗ್ಗೆ ವಿಚಾರಿಸಿದ್ದಾರೆ. ಪ್ರಯಾಣಿಕ ಕೋಳಿ ಮಾಂಸ ಎಂದು ತಿಳಿಸಿದಾಗ ಬಸ್ ನಿಂದ ಇಳಿಯುವಂತೆ ಒತ್ತಾಯಿಸಿದ್ದಾರೆ.
ಕೋಳಿ ಮಾಂಸ ಬಸ್ ನಲ್ಲಿ ತರಲು ಅವಕಾಶವಿಲ್ಲ ಎಂಬ ವಾದ ನಿರ್ವಾಹಕನದ್ದು, ಆದರೇ ಕೂಲಿ ಕಾರ್ಮಿಕನಿಗೆ ಇದರ ಅರಿವಿಲ್ಲದೆ. ಬಸ್ ನಿಂದ ಇಳಿಯಲು ಒಪ್ಪಲಿಲ್ಲ. ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ನಿರ್ವಾಹಕ ಪ್ರಯಾಣಿಕನಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ.
ಈತ ಬಸ್ ನಿಂದ ಇಳಿಯದ ಕಾರಣಕ್ಕಾಗಿ ಚಾಲಕ ಪ್ರಯಾಣಿಕರು ತುಂಬಿದ್ದ ಬಸ್ ನ್ನು ಸೀದಾ ಪೊಲೀಸ್ ಠಾಣೆಗೆ ತಂದು ಪ್ರಯಾಣಿಕನನ್ನು ಎಳೆದು ಇಳಿಸಿ ಹೋಗಿದ್ದಾನೆ. ಈ ವೇಳೆ ಠಾಣೆಯಲ್ಲಿದ್ದ ಎಸ್.ಐ. ರಾಮಕೃಷ್ಣ ಅವರು ಕೆ.ಎಸ್. ಆರ್.ಟಿ.ಸಿ.ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಬುದ್ದಿ ಮಾತು ಹೇಳಿದ್ದಾರೆ.
ಕೂಲಿ ಕಾರ್ಮಿಕರು ಬಸ್ ನಲ್ಲಿ ಮಾಂಸ, ಮೀನು ಕೊಂಡು ಹೋಗಲು ಅವಕಾಶವಿಲ್ಲ ಎಂದಾದರೆ ಮತ್ತೆ ಹೇಗೆ ಕೊಂಡುಹೋಗುವುದು ಎಂಬ ಪ್ರಶ್ನೆಯನ್ನು ಈತ ಮಾಡಿದ್ದಾನೆ. ಕಾರು ,ರಿಕ್ಷಾ ಬಾಡಿಗೆ ಮಾಡಿಕೊಂಡು ಒಂದು ಕೆ.ಜಿ.ಕೋಳಿ ಕೊಂಡು ಹೋಗಬೇಕಾ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಬಡವರು ಕೋಳಿ ಮಾಂಸ ಕೊಂಡು ಹೋದರೆ ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದ್ದು, ನಿರ್ವಾಹಕ ಚಾಲಕರ ಇಂತಹ ನಡೆಯ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿದೆ.
ಬಸ್ ನಲ್ಲಿ ಕೋಳಿ, ಮೀನು, ಮಾಂಸ ಬಸ್ ನಲ್ಲಿ ತರುವಂತಿಲ್ಲ, ಜೀವ ಇರುವ ವಸ್ತುವನ್ನು ತರಬಹುದು, ಮಾಂಸ ಇತರರಿಗೆ ವಾಸನೆ ಬರುತ್ತದೆ. ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಎಂಬ ನಿಟ್ಟಿನಲ್ಲಿ ನಿಗಮ ಅದೇಶ ಮಾಡಿದೆ ಎಂದು ಕೆ.ಎಸ್.ಆರ್.ಟಿ.ಸಿ. ಬಂಟ್ವಾಳ ವಿಭಾಗದ ವಿಭಾಗೀಯ ಅಧಿಕಾರಿ ಶ್ರೀಶ ಭಟ್ ಅವರು ಮಾಹಿತಿ ನೀಡಿದ್ದಾರೆ.

























