ಬೆಂಗಳೂರು : ಇದೊಂದು ಟ್ರಯಾಂಗಲ್ ಲವ್ ಸ್ಟೋರಿ. ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಯುವಕರ ಕಹಾನಿ. ಆದರೆ ಅದರಲ್ಲೊಬ್ಬ ಕೊಲೆಯಾಗಿ ಹೋಗಿದ್ದಾನೆ.
ಪ್ರತಾಪ್ ಮತ್ತು ಲೋಕೇಶ್ ಎಂಬ ಯುವಕರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ನೆಲಮಂಗಲ 8ನೇ ಮೈಲಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು, ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನ ಲವ್ ಮಾಡುತ್ತಿದ್ದರು. ಆದರೆ ಪ್ರೀತಿಯ ವಿಚಾರಕ್ಕೆ ಲೋಕೇಶ್ ಎಂಬಾತ ಕೊಲೆಯಾಗಿ ಹೋಗಿದ್ದಾನೆ.
ಕಿಡ್ನಾಪ್ ಮಾಡಿ ಕೊಲೆ
ಪ್ರತಾಪ್ ಪ್ರೀತಿ ವಿಚಾರಕ್ಕೆ ಲೋಕೇಶ್ನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾನೆ. ಪ್ರತಾಪ್ ಮತ್ತು ಆತನ ಸ್ನೇಹಿತ ಅಕ್ಟೋಬರ್ 5 ರಂದು ಫ್ಯಾಕ್ಟರಿ ಹೊರಗಡೆ ಕಿಡ್ನಾಪ್ ಮಾಡಿ ಲೋಕೇಶ್ನನ್ನು ಬೈಕ್ನಲ್ಲಿ ಹಾಕಿಕೊಂಡು ನೆಲಮಂಗಲದ ಚಿಕ್ಕಕುಕ್ಕನಹಳ್ಳಿಗೆ ಹೋಗಿದ್ದಾನೆ.
ತಲೆ ಜಜ್ಜಿ ಹತ್ಯೆ
ರಾಗಿ ಹೊಲದಲ್ಲಿ ಲೋಕೇಶ್ನನ್ನು ಕರೆದುಕೊಂಡು ಹೋದ ಪ್ರತಾಪ್ ಮತ್ತು ಆತನ ಸ್ನೇಹಿತ ತಲೆ ಜಜ್ಜಿ ಹತ್ಯೆಗೈದಿದ್ದಾರೆ. ಇದಾದ ಮೂರು ದಿನಗಳ ನಂತರ ಹೊಲದಲ್ಲಿ ಲೋಕೇಶ್ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿದ್ದ ಶವ ಕಂಡು ಜಮೀನು ಮಾಲೀಕ ಮಾದನಾಯಕನಹಳ್ಳಿ ಪೊಲೀಸ್ಠಾಣೆಗೆ ತೆರಳಿ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮೃತದೇಹದ ಪೋಟೊ ತೆಗೆದು ಎಲ್ಲ ಸ್ಟೇಷನ್ ಗಳಿಗೆ ರವಾನಿಸಿದ್ದಾರೆ. ಈ ವೇಳೆ ಕೊಲೆಯಾದ ಯುವಕ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹೊಸನಹಳ್ಳಿ ನಿವಾಸಿ ಎಂಬುದು ಬೆಳಕಿಗೆ ಬಂದಿದೆ.
ಟ್ರಯಾಂಗಲ್ ಲವ್ ಸ್ಟೋರಿ
ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಇಲ್ಲೊಂದು ಟ್ರಯಾಂಗಲ್ ಲವ್ ಸ್ಟೋರಿ ಇರುವುದು ಬೆಳಕಿಗೆ ಬಂದಿದೆ. ಕೆಲಸ ಮಾಡುವ ಫ್ಯಾಕ್ಟರಿಯಲ್ಲಿ ಒಂದೇ ಯುವತಿಯನ್ನ ಲೋಕೇಶ್ ಮತ್ತು ಪ್ರತಾಪ್ ಪ್ರೀತಿಸುತ್ತಿದ್ದರು ಎಂಬುದು ಗೊತ್ತಾಗಿದೆ.
ಇನ್ನು ಲೋಕೇಶ್ ಯುವತಿ ಜೊತೆ ನಿತ್ಯ ಪೋನ್ ಸಂಪರ್ಕ ಹೊಂದಿದ್ದನು. ಈ ವಿಚಾರ ತಿಳಿದು ಯುವತಿ ಮತ್ತು ಪ್ರತಾಪ್ ಕೆಲಸ ಬಿಟ್ಟಿದ್ದರು. ನಂತರ ಲೋಕೇಶ್ ಗೆ ಬುದ್ದಿ ಕಲಿಸಬೇಕು ಅಂತ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸರಿಂದ ಪ್ರತಾಪ್ ಮತ್ತು ಆತನ ಸ್ನೇಹಿತ ಮಂಜುನಾಥ್ನ ಬಂಧನವಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























