ಮಂಗಳೂರು : ಸ್ಯಾಂಡಲ್ವುಡ್ ನಟಿ ರಾಧಿಕಾ ಅವರ ಎಸ್ಟೇಟ್ನಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು ಕಾಣೆಯಾಗಿದ್ದಾರೆ.
ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಕಾಣೆಯಾದ ಮಹಿಳೆ.
ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ನಟಿ ರಾಧಿಕಾ ಅವರ ಎಸ್ಟೇಟ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ನಾಗರತ್ನ ಕೆಲಸಕ್ಕೆ ಸೇರಿದ್ದರು. ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ, ಅಕ್ಟೋಬರ್ 13ರಂದು ನಾಗರತ್ನ ಏಕಾಏಕಿ ಎಸ್ಟೇಟ್ನಿಂದ ಕಾಣೆಯಾಗಿದ್ದಾರೆ.
ಅಕ್ಟೋಬರ್ 13 ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸಕ್ಕೆ ಹೋಗಿದ್ದರು. ಆ ದಿನ ಬೆಳಿಗ್ಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಇನ್ನು ಮನೆಯಿಂದ ನಾಪತ್ತೆಯಾಗಿದ್ದ ನಾಗರತ್ನ ಮರುದಿನ ಅಂದರೆ ಅಕ್ಟೋಬರ್ 14 ರಂದು ಪತಿ ಮಹದೇವಗೆ ಕರೆ ಮಾಡಿ ದೂರ ಹೋಗುತ್ತಿದ್ದೇನೆ, ಹುಡುಕುವ ಅಗತ್ಯವಿಲ್ಲ ಎಂದು ಹೇಳಿ ಫೋನ್ ಕಟ್ಟಿ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಹಾ ಕುಡಿಯಲು ಹೋದವಳು ಯಾಕೆ ಬಂದಿಲ್ಲ ಎಂದು ಮನೆ ಕಡೆ ಹೋಗಿ ನೋಡಿದಾಗ ಆಕೆ ಮನೆಯಲ್ಲಿರದೆ ಕಾಣೆಯಾಗಿದ್ದಳು ಎಂದು ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

























