ನಾಯಿ ನಿಯತ್ತಿನ ಪ್ರಾಣಿ. ಹಾಗಾಗಿ ಮನುಷ್ಯನನ್ನು ನಂಬದೇ ಇದ್ದರು ಶ್ವಾನವನ್ನು ನಂಬುವ ಅದೆಷ್ಟೋ ಜನರಿದ್ದಾರೆ. ಆದರೆ ಇಲ್ಲೊಂದು ಘಟನೆ ಮಾತ್ರ ಎಲ್ಲರನ್ನು ಅಚ್ಚರಿಯತ್ತ ದೂಡುವಂತೆ ಮಾಡಿದೆ. ಅದೇನೆಂದರೆ ವಾರಣಾಸಿಯ ಬೀದಿ ನಾಯಿಯೊಂದು ನೆದರ್ಲೆಂಡ್ಗೆ ಹಾರಲು ಸಜ್ಜಾಗಿದೆ.
ಕಳೆದ ಜೂನ್ ತಿಂಗಳಿನಲ್ಲಿ ಇಟಲಿ ಮೂಲದ ಮಹಿಳೆಯೊಬ್ಬರು ಉತ್ತರಪ್ರದೇಶದ ಬೀದಿ ನಾಯಿಯೊಂದನ್ನು ದತ್ತು ಪಡೆದು ಅದಕ್ಕೆ ಪಾಸ್ಪೋರ್ಟ್ ಮಾಡಿಸಿ ಇಟಲಿಗೆ ಕೊಂಡೊಯ್ದಿದ್ದರು.
ಆದರೀಗ ವಾರಣಾಸಿಯ ಜಯಾ ಎಂಬ ಶ್ವಾನಕ್ಕೆ ಮನಸೋತ ನೆದರ್ಲೆಂಡ್ ಮೂಲದ ಮಹಿಳೆಯೊಬ್ಬರು ಅದನ್ನು ದತ್ತು ಪಡೆದು ವೀಸಾ, ಪಾಸ್ಪೋರ್ಟ್ ಮಾಡಿಸಿ ವಿದೇಶಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ.
ವಿದೇಶಕ್ಕೆ ಹಾರಲು ಜಯಾ ರೆಡಿ
ಮೆರಲ್ ಬೊಂಟೆನ್ಬೆಲ್ ಎಂಬ ಆ್ಯಮ್ಸ್ಟರ್ಡ್ಯಾಂನ ಮಹಿಳೆ ವಾರಣಾಸಿಗೆ ಭೇಟಿ ನೀಡಿದಾಗ ಜಯಾ ಎಂಬ ಶ್ವಾನವನ್ನು ಕಂಡು ಅದರೊಂದಿಗೆ ನಿತ್ಯವೂ ಮಾತನಾಡುತ್ತಾ ಆಹಾರ ನೀಡಿದ್ದಾರೆ. ಹೀಗೆ ವಾರಣಾಸಿಯಲ್ಲಿ ಇದ್ದಷ್ಟು ದಿನ ಶ್ವಾನದ ಜೊತೆಗೆ ಮಹಿಳೆಗೆ ಆತ್ಮೀಯತೆ ಬೆಳೆದಿದೆ. ಕೊನೆಗೆ ಈ ಬೀದಿ ಶ್ವಾನವನ್ನು ಮೆರೆಲ್ ತನ್ನೂರಿಗೆ ಕರೆದುಕೊಂಡು ಹೋಗಬೇಕೆಂದು ಮನಸ್ಸಾಗಿದೆ. ಅದಕ್ಕಾಗಿ ಏರ್ಪಾಡು ಕೂಡ ಮಾಡಿದ್ದಾರೆ.
ಜಯಾಳಿಗೋಸ್ಕರ ಮೆರೆಲ್ ಸ್ಥಳೀಯಾಡಳಿತ ಜೊತೆಗೆ ಮಾತನಾಡಿ, ಅದಕ್ಕಾಗಿ ಪ್ರಮಾಣ ಪತ್ರ ರಚಿಸಿ ಅನುಮತಿ ಪಡೆದಿದ್ದಾರೆ. ನಾಯಿಯನ್ನ ದತ್ತು ಪಡೆಯುವ ಮೂಲಕ ವಿದೇಶಕ್ಕೆ ಕರೆದೊಯ್ಯಲು ಎಲ್ಲಾ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದಾರೆ. ಜೊತೆಗೆ ನೆದರ್ಲೆಂಡ್ನಿಂದಲೂ ಜಯಾಳಿಗಾಗಿ ವೀಸಾ ತರಿಸಿಕೊಂಡಿದ್ದಾರೆ.
ಅಚ್ಚರಿ ಸಂಗತಿ ಎಂದರೆ ಮೆರಲ್ ತನ್ನ ಮನಸ್ಸು ಗೆದ್ದ ಬೀದಿ ಶ್ವಾನಕ್ಕಾಗಿ ಆರು ತಿಂಗಳ ಕಾಲ ಭಾರತದಲ್ಲಿ ಇದ್ದರು.


























