ಬಂಟ್ವಾಳ : ತಂಡವೊಂದು ಇನ್ನೊಂದು ತಂಡದ ಯುವಕರಿಗೆ ಚೂರಿಯಿಂದ ತಿವಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಪಾಣೆಮಂಗಳೂರು ನಿವಾಸಿ ಸಂದೀಪ್ ನೀಡಿದ ದೂರಿನ ಮೇರೆಗೆ ಪ್ರಸನ್ನ, ಶೋಧನ್, ಪ್ರಕಾಶ್ (ಮುನ್ನ) ವಿರುದ್ಧ ಪ್ರಕರಣ ದಾಖಲಾಗಿದೆ.
ಸಂದೀಪ್ ಎಂಬವರು ತನ್ನ ಸಹೋದರ ದೇವದಾಸ ಹಾಗೂ ಗೆಳೆಯರೊಂದಿಗೆ ಅ.26 ರಂದು ರಾತ್ರಿ ಮೆಲ್ಕಾರ್ ಬ್ರಿಜ್ ನ ಬಳಿ ಜುವೆಲ್ಲರ್ ಎದುರು ಭಾಗದಲ್ಲಿ ಹಾಕಿದ್ದ ಹುಲಿವೇಷದ ಬ್ಯಾನರಗಳನ್ನು ತೆರೆವುಗೊಳಿಸುತ್ತಿದ್ದಾಗ, ಪ್ರಸನ್ನ, ಶೋಧನ್ ನರಹರಿ ಪರ್ವತ ಹಾಗೂ ಪ್ರಕಾಶ್ ಯಾನೆ ಮುನ್ನ ಹಾಗೂ ಇತರರು ಬಂದಿದ್ದು, ಶೋಧನ್ ಎಂಬಾತನು ಸಂದೀಪ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿರುತ್ತಾರೆ.
ಈ ವೇಳೆ ಗಲಾಟೆ ತಡೆಯಲು ಬಂದ ಸಹೋದರ ದೇವದಾಸನಿಗೆ ಶೋಧನ ಎಂಬಾತನು ಚೂರಿಯಿಂದ ತಿವಿದಿದ್ದು, ಸಂದೀಪ್ ಗೂ ಚೂರಿಯಿಂದ ಗಾಯಗೊಳಿಸಿರುತ್ತಾನೆ.
ಪ್ರಸನ್ನ ಎಂಬಾತನು ಸಂದೀಪ್ ಸಹೋದರನಿಗೆ ಬಾಟಲಿಯಿಂದ ಹಲ್ಲೆ ನಡೆಸಿದ್ದು, ಸಂದೀಪ್ ಜೊತೆಗಿದ್ದ ಶಂಕರ ಎಂಬಾತನಿಗೆ ಕೂಡಾ ಪ್ರಸನ್ನ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಪ್ರಕಾಶ್ ಯಾನೆ ಮುನ್ನ ಎಂಬಾತನು ಕೂಡಾ ಹಲ್ಲೆಯಲ್ಲಿ ಭಾಗಿಯಾಗಿದ್ದು, ಅಲ್ಲಿದ್ದವರು ಬೊಬ್ಬೆ ಹಾಕಿದಾಗ ಎಲ್ಲರೂ ಓಡಿ ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ- 126/2023 ಕಲಂ: 504, 506, 324, 323, 307, ಜೊತೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























