ಬಂಟ್ವಾಳ : ವ್ಯಕ್ತಿಯೋರ್ವರ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕದ್ದುಕೊಂಡು ಹೋಗಿರುತ್ತಾರೆಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ.
ಬಂಟ್ವಾಳ ಸರಪಾಡಿ ನಿವಾಸಿ ವಸಂತ ಸಾಲಿಯಾನ್ ಎಂಬವರು ನೀಡಿರುವ ದೂರಿನ ಮೇರೆಗೆ ಪುಷ್ಪಲತಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ವಸಂತ ಸಾಲಿಯಾನ್ (37) ಎಂಬವರ ಜಾಗಕ್ಕೆ ಅ.27 ರಂದು ಪುಷ್ಪಲತಾ ಮತ್ತು ಇತರ ಕೆಲಸಗಾರರು ಅಕ್ರಮವಾಗಿ ಪ್ರವೇಶಿಸಿ ರಾತ್ರೋ ರಾತ್ರಿ ವಸಂತ್ ರವರ ತೋಟದ ಅಡಿಕೆ ಮರದಿಂದ ಅಡಿಕೆಯನ್ನು ಕೊಯ್ದು ಕದ್ದು ಕೊಂಡೊಗಿರುತ್ತಾರೆ. ಇದರಿಂದಾಗಿ ಸುಮಾರು 4 ರಿಂದ 5 ಕ್ವಿಂಟಾಲ್ ಅಡಿಕೆ ನಷ್ಟ ಉಂಟಾಗಿರುತ್ತದೆ.
ವಸಂತ್ ರವರ ಮನೆ ಸದ್ರಿ ಜಾಗದಿಂದ ದೂರ ಇರುವುದನ್ನು ದುರುಪಯೋಗ ಪಡಿಸಿ ಈ ಕೃತ್ಯವನ್ನು ಪುಷ್ಪಲತಾ ಮತ್ತು ಇತರರು ಮಾಡಿರುತ್ತಾರೆ. ಈ ಕೃತ್ಯದಿಂದ ಸುಮಾರು 2.5 ಲಕ್ಷ ನಷ್ಟ ಉಂಟಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ 109/2023 ಕಲಂ: 379 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























