ಒಂದೇ ಕುಟುಂಬದ ಏಳು ಮಂದಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.
ಸೂರತ್‌ನ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಮೃತ 7 ಮಂದಿಯಲ್ಲಿ ಮೂವರು ಮಕ್ಕಳಿದ್ದಾರೆ. 6 ಮಂದಿ ವಿಷಕಾರಿ ಆಹಾರ ಸೇವಿಸಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಕಂಡುಬಂದರೆ, ಒಬ್ಬರು ಮಾತ್ರ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮನೀಷ್ ಸೋಲಂಕಿ, ಪತ್ನಿ ರಿತಾ, ತಂದೆ ಕನು, ತಾಯಿ ಶೋಭಾ ಹಾಗೂ ಮಕ್ಕಳಾದ ದಿಶಾ, ಕಾವ್ಯ, ಕುಶಾಲ್ ಸಾವನ್ನಪ್ಪಿದವರು.
ಮನೆಯ ಯಜಮಾನ ಮನೀಷ್ ಸೋಲಂಕಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರ್ಥಿಕ ಮುಗ್ಗಟ್ಟಿನಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಲಾದ ಸೂಸೈಡ್ ನೋಟ್ ಪತ್ತೆಯಾಗಿದೆ. ಆದರೆ 7 ಮಂದಿಯ ಸಾವಿನ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ..?
ಸೋಲಂಕಿ ಜೊತೆ ಸುಮಾರು 35 ಕಾರ್ಪೆಂಟರ್ಸ್ ಕೆಲಸ ಮಾಡುತ್ತಿದ್ದರು. ನಿನ್ನೆ ಬೆಳಗ್ಗೆ ಈ ಉದ್ಯೋಗಿಗಳು ಸೋಲಂಕಿಯನ್ನು ಸಂಪರ್ಕಿಸಲು ಮನೆಗೆ ಬಂದಿದ್ದರು. ಆದರೆ ಎಷ್ಟೇ ಸಮಯವಾದರೂ ಮನೆಯಿಂದ ಆಚೆ ಬಾರದಿದ್ದಕ್ಕೆ ಅನುಮಾನಗೊಂಡು ಬಾಗಿಲು ಮುರಿದು ಒಳಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ..

























