ಮಂಗಳೂರು : ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ ಕೊಂಡೇಲಾ ಗ್ರಾಮದ ದುರ್ಗಾ ನಗರ ಎಂಬಲ್ಲಿ ಮಹಿಳೆಯೊಬ್ಬರು ಅಸಹಜವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ರತ್ನ ಶೆಟ್ಟಿ (60) ಗುರುತಿಸಲಾಗಿದೆ.

ಮೃತ ಮಹಿಳೆ ರತ್ನ ಕಟೀಲು ದುರ್ಗಾ ನಗರದ ಬಾಲಕೃಷ್ಣ ಎಂಬವರ ಮನೆಯ ಬದಿಯ ಕೋಣೆಯಲ್ಲಿ ಮಗ ರವಿರಾಜ್ ಜೊತೆ ವಾಸ್ತವ್ಯವಿದ್ದು, ಗಿಡಿಗೆರೆ ಚರ್ಚ್ ಬಳಿಯ ಬಾಲಕೃಷ್ಣ ಎಂಬವರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗಿರಲಿಲ್ಲ. ಈ ನಡುವೆ ಮಗ ತಾಯಿ ಜೊತೆ ವಾಸ್ತವ್ಯವಿದ್ದ ಕೋಣೆಗೆ ಬೀಗ ಹಾಕಿ ನಾಪತ್ತೆಯಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಮನೆಯ ಪರಿಸರದಲ್ಲಿ ವಾಸನೆ ಬರುತ್ತಿರುವುದನ್ನು ಕಂಡು ಅನುಮಾನದಿಂದ ಮನೆಯವರು ಮಹಿಳೆ ವಾಸ್ತವ್ಯವಿದ್ದ ಕೋಣೆಯ ಕಿಟಕಿಯಲ್ಲಿ ನೋಡಿದಾಗ ಮಹಿಳೆಯ ಮುಖ ಬಟ್ಟೆಯಿಂದ ಮುಚ್ಚಿದ ಸ್ಥಿತಿಯಲ್ಲಿ ಹಾಗೂ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಕೂಡಲೇ ಸ್ಥಳೀಯರು ಬಜಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚುತಜ್ಞರು, ಮಂಗಳೂರು ಎಸಿಪಿ, ಬಜಪೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
























