ಬೆಳ್ತಂಗಡಿ : ಮಹಿಳೆಯೋರ್ವರ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಶಶಿಕಲಾ (27) ರವರ ಸಹೋದರ ಶಶಿಧರ ಎಂಬವರು ನೀಡಿರುವ ದೂರಿನ ಮೇರೆಗೆ ಪತಿ ಸುಧಾಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು ಬೆಳಾಲು ನಿವಾಸಿ ಶಶಿಧರ ಎಂಬವರ ಸಹೋದರಿ ಶಶಿಕಲಾ ಸುಧಾಕರ ಎಂಬವರನ್ನು ಸುಮಾರು 7 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿ ಬೆಳ್ತಂಗಡಿ ತಾಲೂಕು, ಬೆಳಾಲು ಗ್ರಾಮದ ಕೆಂಪನೊಟ್ಟು ಎಂಬಲ್ಲಿ 6 ವರ್ಷದ ಮಗಳೊಂದಿಗೆ ವಾಸವಾಗಿರುತ್ತಾರೆ.
ಸುಧಾಕರನಿಗೆ ಅನೈತಿಕ ಸಂಪರ್ಕ ಇದೆಯೆಂದು ಶಶಿಕಲಾ ಮತ್ತು ಸುಧಾಕರನ ಮಧ್ಯೆ ಗಲಾಟೆಯಾಗುತ್ತಿದ್ದು, ಇದೇ ವಿಚಾರದಲ್ಲಿ ಮನೆಯವರು ಬಂದು ಆಗಾಗ ಸಮಾಧಾನ ಪಡಿಸಿ ಹೋಗುತ್ತಿರುವುದಾಗಿದೆ. ನ.3 ರಂದು ಬೆಳಿಗ್ಗೆ ಪತಿ ಹಾಗೂ ಶಶಿಕಲಾ ಮಧ್ಯೆ ಜಗಳವಾಗಿದ್ದು, ಆ ಸಮಯ ಪತಿ ಸುಧಾಕರನು ಶಶಿಕಲಾಳ ಕುತ್ತಿಗೆಯನ್ನು ಕೈಯಿಂದ ಒತ್ತಿ ಹಿಡಿದಾಗ ಶಶಿಕಲಾ ನೆಲಕ್ಕೆ ಬಿದ್ದು ಪ್ರಜ್ಞೆ ಇಲ್ಲದಾಗಿದ್ದು, ಬಳಿಕ ಸುಧಾಕರ ಕೋಪದಿಂದ ಶಶಿಕಲಾ ಬದುಕಿರಬಾರದೆಂದು ಎತ್ತಿ ಬಾವಿಗೆ ಹಾಕಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 86/2023 ಕಲಂ:302 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























