ಪುತ್ತೂರು : ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ರನ್ನು ನ.6 ರಂದು ರಾತ್ರಿ ವೇಳೆ ದುಷ್ಕರ್ಮಿಗಳು ಹತ್ಯೆಮಾಡಿದ್ದು, ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಿಗ್ಭ್ರಮೆ ಮೂಡಿಸಿದೆ.
ಚೇತನ್, ಮನೀಶ್, ಮಂಜ, ಕೇಶವ ಪಡೀಲು ಎಂಬವರು ಈ ಕೃತ್ಯವೆಸಗಿದ್ದಾರೆಂದು ತಿಳಿದು ಬಂದಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಷಯ್ ಸ್ನೇಹಿತ ವಿಖ್ಯಾತ್ ನೀಡಿದ ದೂರಿನಲ್ಲೇನಿದೆ..!!??
ನ.6 ರಂದು ರಾತ್ರಿ ಮನೆಯಿಂದ ಹೊರಟು ಪುತ್ತೂರಿನ ನೆಹರು ನಗರದ ಜಂಕ್ಷನ್‌ಲ್ಲಿರುವ ಪೆಟ್ರೋಲ್ ಬಂಕ್ ಎದುರು ಇರುವ ಬೀಡಾ ಅಂಗಡಿಯಲ್ಲಿ ವಿಖ್ಯಾತ್ ಹಾಗೂ ಸ್ನೇಹಿತರಾದ ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ನಿಂತುಕೊಂಡಿದ್ದಾಗ ಕಾಲೇಜಿನ ಹುಡುಗನೊಬ್ಬ ನೆಹರು ನಗರದ ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟಿಕೊಂಡು ಬರುವಾಗ ಮಂಗಳೂರು ಕಡೆಯಿಂದ ಒಂದು ಹೊಸ ಬೈಕನ್ನು ಅದರ ಸವಾರ ಚಲಾಯಿಸಿಕೊಂಡು ಬಂದು ಆ ಹುಡುಗನಿಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದಿಂದ ಕಾಲೇಜಿನ ಹುಡುಗನಿಗೆ ಮತ್ತು ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೂಡಲೇ ವಿಖ್ಯಾತ್, ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ಸೇರಿಕೊಂಡು ಆ ಇಬ್ಬರು ಹುಡುಗರನ್ನು ಆಟೋ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದು, ಇಬ್ಬರ ಆಸ್ಪತ್ರೆಯ ಚಿಕಿತ್ಸಾ ವೆಚ್ಚ 1800 ರೂ. ಅನ್ನು ಆಸ್ಪತ್ರೆಗೆ ಪಾವತಿಸುವಂತೆ ಬೈಕ್ ಸವಾರನಲ್ಲಿ ಅಕ್ಷಯ್ ಕಲ್ಲೇಗ ತಿಳಿಸಿದ್ದು, ಆಗ ಬೈಕ್ ಸವಾರ ಆತನಿಗೆ ಪರಿಚಯವಿದ್ದ ಮನೀಶ್ ಮತ್ತು ಚೇತನ್ ಎಂಬುವರಿಗೆ ಕರೆ ಮಾಡಿಕೊಟ್ಟಾಗ ದೂರವಾಣಿಯಲ್ಲಿ ಚೇತನ್ ಎಂಬಾತ ಅಕ್ಷಯ್ ರಲ್ಲಿ ನಾವು ಆಸ್ಪತ್ರೆಯ ಬಿಲ್ ಪಾವತಿಸುವುದಿಲ್ಲ.., ನೀವು ಬೇಕಾದರೆ ಪೊಲೀಸ್ ಕಂಪ್ಲೆಂಟ್ ನೀಡಿ ಎಂದು ಉಡಾಫೆಯಾಗಿ ಮಾತನಾಡಿ ಕರೆ ಕಟ್ ಮಾಡಿರುತ್ತಾರೆ. ಬಳಿಕ ಪರಿಚಯದ ಕಾರ್ತಿಕ್ ಎಂಬವರು ಆಸ್ಪತ್ರೆಗೆ ಬಂದು ಬಿಲ್ ಪಾವತಿ ಮಾಡಿ ಗಾಯಾಳುಗಳನ್ನು ಮತ್ತು ವಿಖ್ಯಾತ್ ಮತ್ತು ಅಕ್ಷಯ್ ಕಲ್ಲೇಗ ,ಅಲ್ತಾಪ್ ರನ್ನು ಅವರ ಕಾರಿನಲ್ಲಿ ನೆಹರು ನಗರದ ತನಕ ಡ್ರಾಫ್ ನೀಡಿ ಹೋಗಿರುತ್ತಾರೆ.
ಆಗ ವಿಖ್ಯಾತ್, ಅಕ್ಷಯ್ ಕಲ್ಲೇಗ ಮತ್ತು ಅಲ್ತಾಫ್ ನಗರದ ಕೆನರಾ ಬ್ಯಾಂಕ್ ಎಟಿಎಂ ಪಕ್ಕದಲ್ಲಿ ನಿಂತಿರುವಾಗ ಅಕ್ಷಯ್.., ಮನೀಶ್ ಹಾಗೂ ಚೇತನ್ ರವರಿಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಾ “ನೀವು ಬೇಕಾದರೆ ನಗರಕ್ಕೆ ಬನ್ನಿ” ಎಂದು ಮಾತನಾಡುತ್ತಿದ್ದನು. ಸ್ವಲ್ಪ ಸಮಯದ ನಂತರ ಪುತ್ತೂರು ಕಡೆಯಿಂದ ಒಂದು ಗ್ರೇ ಬಣ್ಣದ ನ್ಯಾನೋ ಕಾರಿನಲ್ಲಿ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬುವರು ಬಂದಿದ್ದು , ಆಗ ಚೇತನ್ ಅಕ್ಷಯ್ ರಲ್ಲಿ ತುಳು ಭಾಷೆಯಲ್ಲಿ “ಏನು ಕರೆದದ್ದು ಬಾರಿ ಅಹಂಕಾರನಾ ನಿನಗೆ?” ಎಂದು ಜೋರು ಜೋರು ಮಾತನಾಡುತ್ತಾ ಅಕ್ಷಯ್ ಮೈ ಮೇಲೆ ಕೈ ಹಾಕಿ ಕೈಯಿಂದ ಹೊಡೆಯಲು ಪ್ರಾರಂಭಿಸಿರುತ್ತಾರೆ. ಆಗ ವಿಖ್ಯಾತ್ ಮತ್ತು ಅಲ್ತಾಫ್, ಅಕ್ಷಯ್ ರನ್ನು ಬಿಡಿಸಲು ಮುಂದಾದಾಗ ಅವರ ಕಾರಿನಿಂದ ಚೇತನ್ ಮತ್ತು ಮನೀಶ್ 2 ತಲವಾರುಗಳನ್ನು ತೆಗೆದು ಅದರಲ್ಲಿ ಚೇತನ್ ತಲವಾರಿನಿಂದ ಅಕ್ಷಯ್ ಬಲಕೈಗೆ ಕಡಿದಿದ್ದು, ಮನೀಶ್ ತಲವಾರು ಹಿಡಿದುಕೊಂಡು ವಿಖ್ಯಾತ್ ಕಡೆಗೆ ಬೀಸುತ್ತಾ ತುಳುಭಾಷೆಯಲ್ಲಿ ನಿಮ್ಮನ್ನು ಈಗಲೇ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳುತ್ತಾ ವಿಖ್ಯಾತ್ ರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ತಪ್ಪಿಸಿಕೊಂಡು ಅಕ್ಷಯ್ ರನ್ನು ಆತನ ಬೈಕಿನಲ್ಲಿ ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಚೇತನ್ ಮತ್ತು ಮನೀಶ್ ತಲವಾರಿನಿಂದ ಅಕ್ಷಯ್ ಕುತ್ತಿಗೆಯ ಮುಂದೆ ಮತ್ತು ಮುಖಕ್ಕೆ ಕಡಿದಿದ್ದು, ಆಗ ಮಂಜ ಮತ್ತು ಕೇಶವ.., ವಿಖ್ಯಾತ್ ರನ್ನು ಹಿಡಿಯಲು ಬಂದಾಗ ವಿಖ್ಯಾತ್ ಬೈಕನ್ನು ಅಲ್ಲೇ ಬಿಟ್ಟು ಅಲ್ಲಿಂದ ಓಡಿ ಹೋಗುತ್ತಿರುವಾಗ.., ಅಕ್ಷಯ್ ರನ್ನು ತಲವಾರಿನಿಂದ ಕಡಿಯುತ್ತಾ ಮುಖ್ಯರಸ್ತೆ ಕಡೆಗೆ ಓಡಿಸಿಕೊಂಡು ಹೋಗುತ್ತಿದ್ದರು.
ವಿಖ್ಯಾತ್ ಅಲ್ಲಿಂದ ತಪ್ಪಿಸಿಕೊಂಡು ಪರಿಚಯದ ದಿವಾಕರ ಎಂಬುವರ ಮನೆಗೆ ಹೋಗಿ ಅಲ್ತಾಫ್ ಗೆ ಕರೆ ಮಾಡಿದಾಗ ಅಲ್ತಾಫ್ ಕೂಡ ಅಲ್ಲಿಂದ ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ. ನಂತರ ವಿಖ್ಯಾತ್ ತನ್ನ ಸ್ನೇಹಿತರ ಜೊತೆ ನೆಹರು ನಗರಕ್ಕೆ ಬಂದು ನೋಡಿದಾಗ ಹೋಟೆಲ್ ನ ಪೂರ್ವಬದಿಯ ಹುಲ್ಲು ಪೊದೆಯಲ್ಲಿ ಅಕ್ಷಯ್ ಕಲ್ಲೇಗರನ್ನು ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಮುಖಕ್ಕೆ, ಕೈಗೆ, ಕುತ್ತಿಗೆಗೆ ಹಾಗೂ ದೇಹದ ಇತರ ಭಾಗಗಳಿಗೆ ಕಡಿದು ಕೊಲೆ ಮಾಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.



























