ಬಂಟ್ವಾಳ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲು ಹಾಗೂ ಪಕ್ಷ ಸಂಘಟನೆಗಾಗಿ ಬಂಟ್ವಾಳ ಬ್ಲಾಕ್ ಗೆ ಚುನಾವಣೆ ವೀಕ್ಷಕರಾಗಿ ಮಹೇಶ್ ರೈ ಕಾವುರವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇಮಕಗೊಳಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆ ಸಜ್ಜಾಗುತ್ತಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಈಗಾಗಲೇ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ನೂತನ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದೆ.
ಮಹೇಶ್ ರೈ ಕಾವು ರವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು-ವಿಟ್ಲ-ಉಪ್ಪಿನಂಗಡಿ ಬ್ಲಾಕ್ ನ ವೀಕ್ಷಕರಾಗಿ ಅಶೋಕ್ ರೈ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.
ನಿಯೋಜಿತ ವೀಕ್ಷಕರು ಈ ಕೂಡಲೇ ತಮಗೆ ವಹಿಸಲಾಗಿರುವ ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗಳಿಗೆ ತೆರಳಿ ಸ್ಥಳೀಯ ಶಾಸಕರು, ಮಾಜಿ ಶಾಸಕರು, 2023ರ ವಿಧಾನಸಭಾ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಈ ನಿಟ್ಟಿನಲ್ಲಿ ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಹಾಜರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸೂಚಿಸಿದ್ದಾರೆ.


























