ಬಂಟ್ವಾಳ : ತಾಲೂಕಿನ ಕೆದಿಲ ಗ್ರಾಮದ ಗೋಮಾಳದ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಗೋಮಾಳ ಜಮೀನಿನಲ್ಲಿರುವ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ, ಗಡಿ ಗುರುತು ನಡೆಸಿ, ಸಂರಕ್ಷಿಸಿ ಉದ್ದೇಶಿತ ಕಾರ್ಯಕ್ಕೆ ಬಳಸುವಂತೆ ಹಿಂದೂ ಜಾಗರಣ ವೇದಿಕೆ ಹಾಗೂ ಗೋಮಾಳ ಸಂರಕ್ಷಣಾ ಸಮಿತಿ ಕೆದಿಲ, ಪೆರಾಜೆ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಸ.ನಂ. 115/1 ರಲ್ಲಿ 14.56 ಎಕರೆ ವಿಸ್ತೀರ್ಣದ ಜಮೀನು ಮತ್ತು ಪೆರಾಜೆ ಗ್ರಾಮದ ಸ.ನಂ. 164/1ಬಿ ರಲ್ಲಿ 19.75 ಎಕರೆ ಗೋಮಾಳಕ್ಕೆ ಜಮೀನಾಗಿರುತ್ತದೆ. ಕೆದಿಲ ಗ್ರಾಮಕ್ಕೆ ಸೇರಿದ ಸ.ನಂ.115/1 ರಲ್ಲಿ 14.56 ಜಮೀನಿನಲ್ಲಿ ಅಕ್ರಮವಾಗಿ ಒತ್ತುವರಿ ಆಗಿ ಮನೆಗಳು ನಿರ್ಮಾಣವಾಗಿದ್ದು, ಹಾಗೆಯೇ ಗೋಮಾಳದ ಜಮೀನನ್ನು ಕಬಳಿಸುವ ಸಲುವಾಗಿ ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಮಾರ್ಚ್ ತಿಂಗಳಿನಲ್ಲಿ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ.
ಇದೀಗ ಪುನಃ ಅಕ್ರಮವಾಗಿ ಕಟ್ಟಡ, ಶೆಡ್, ಯಂತ್ರದ ಮೂಲಕ ಮಣ್ಣು ಅಗೆದು ಸಮತಟ್ಟುಗೊಳಿಸಿ, ಕಟ್ಟಡಕ್ಕೆ ಪೌಂಡೇಶನ್ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ನಡೆಸಿರುತ್ತಾರೆ.
ಹೀಗೆ ಮುಂದುವರಿದಲ್ಲಿ ಗೋಮಾಳ ಸಲುವಾಗಿ ಮೀಸಲಾದ ಸರಕಾರಿ ಜಮೀನು ಅನ್ಯರ ಅಕ್ರಮ ಒತ್ತುವರಿಗೆ ಒಳಗಾಗಿ ಸರಕಾರಿ ಜಮೀನು ಅಲಭ್ಯವಾಗುವ ಸಂಭವವಿರುತ್ತದೆ.
ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಈ ಬಗ್ಗೆ ಮನವಿ ಸಲ್ಲಿಸಿದ್ದು, ಆದರೇ ಸಂಬಂಧಪಟ್ಟ ಅಧಿಕಾರಿಗಳು ಗೋಮಾಳದ ಜಮೀನಿನಲ್ಲಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿರುವುದಿಲ್ಲ. ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಳ್ಳದೇ ಒತ್ತುವರಿ ಮತ್ತು ನಿರ್ಮಾಣ ಕಾರ್ಯ ತಡೆರಹಿತವಾಗಿ ನಡೆಯುತ್ತಿದೆ.
2013 ರಲ್ಲಿಯೂ ಅಕ್ರಮ ಕಟ್ಟಡಗಳು ನಿರ್ಮಾಣವಾಗಿ ದೂರು ಸಲ್ಲಿಕೆಯಾಗಿ ಅಶಾಂತ ವಾತಾವರಣ ನಿರ್ಮಾಣವಾಗಿರುತ್ತದೆ. ಆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸದರಿ ಜಮೀನಿನಲ್ಲಿ ಒತ್ತುವರಿ ಆಗಿದ್ದಲ್ಲಿ, ಒತ್ತುವರಿದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆದೇಶಿಸಿರುತ್ತಾರೆ. ಈವರೆಗೆ ಆ ಬಗ್ಗೆ ಯಾವುದೇ ಪ್ರಗತಿ ಆಗಿರುವುದಿಲ್ಲ. ಸದರಿ ಗೋಮಾಳದ ಜಮೀನಿನಲ್ಲಿ ಖಾಸಗಿ ಕೋಳಿ ಫಾರ್ಮ್ ಕಟ್ಟಡ. ಕೃಷಿ, ಇತ್ಯಾದಿಗಳಿಂದ ಅನಾಯಾಸವಾಗಿ ಒತ್ತುವರಿಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಾರಿಂಜ ಕ್ಷೇತ್ರದ ಸುತ್ತಮುತ್ತ ನಡೆಯುತ್ತಿದ್ದ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದ ಹಿಂದೂ ಜಾಗರಣ ವೇದಿಕೆ ಇದೀಗ ಗೋಮಾಳ ಅತಿಕ್ರಮಣದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆನ್ನಲಾಗಿದೆ.