ಮದುವೆ ಅನ್ನೋದು ಜೀವನದಲ್ಲಿ ಒಮ್ಮೆ ಬರುವ ಸುಸಂದರ್ಭ. ನಾವು ಯಾರ ಜೊತೆ ವಿವಾಹವಾಗುತ್ತೇವೆ ಎಂಬುದು ಮೊದಲೇ ಸ್ವರ್ಗದಲ್ಲಿ ನಿರ್ಧರಿಸಿರುತ್ತೆ ಎನ್ನುವುದು ಸಂಪ್ರದಾಯದ ಮಾತು. ಈ ಮಾತಿನಂತೆ ಎಷ್ಟೋ ಜನರು ತಾವು ಊಹಿಸದ ಸಂಗಾತಿಯ ಕೈ ಹಿಡಿದು ಸುಖ ಸಂಸಾರದ ಹಾದಿಯಲ್ಲಿ ಸಾಗುತ್ತಿರುತ್ತಾರೆ. ಸದ್ಯ ಇಂತಹದ್ದೆ ಒಂದು ವಿವಾಹ ಮಹೋತ್ಸವ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಫತೇಪುರದ ಜಿಲ್ಲೆಯ ಹಳ್ಳಿಯೊಂದರ ಹಾರ್ದಿಕ್ ವರ್ಮಾ (32) ಅವರು ಕೆಲಸದ ನಿಮಿತ್ತ ನೆದರ್‌ಲ್ಯಾಂಡ್‌ಗೆ ತೆರಳಿದ್ದರು. ಅಲ್ಲಿ ಅವರು ಫಾರ್ಮಾಸ್ಯುಟಿಕಲ್ ಎನ್ನುವ ಕಂಪನಿಯಲ್ಲಿ ಸುಪರ್ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಗೇಬ್ರಿಯೆಲಾ ದುಡಾ (21) ಎನ್ನುವ ನೆದರ್ಲ್ಯಾಂಡ್ನ ಚೆಲುವೆ ಪರಿಚಯವಾಗಿದ್ದಾಳೆ.
ಡಚ್ ದೇಶದ ಚೆಲುವೆ ಗೇಬ್ರಿಯೆಲಾಳ ಹಾಲಿನಂತ ಬಣ್ಣಕ್ಕೆ ಮಾರುಹೋದ ಭಾರತೀಯ ಹಾರ್ದಿಕ್, ಆಕೆಯನ್ನು ಲವ್ ಮಾಡಲು ಶುರು ಮಾಡಿದ್ದಾನೆ. ಈ ಬಗ್ಗೆ ಒಮ್ಮೆ ಆಕೆ ಬಳಿ ತನ್ನ ಪ್ರೇಮ ನಿವೇದನೆ ಕೂಡ ಮಾಡಿದ್ದಾನೆ. ಇದಕ್ಕೆ ಒಪ್ಪಿದ್ದ ಗೇಬ್ರಿಯೆಲಾಳ ಕಳೆದ 3 ವರ್ಷದಿಂದ ಇಬ್ಬರು ನೆದರ್ಲ್ಯಾಂಡ್ನಲ್ಲೇ ಲಿವಿಂಗ್ ಟುಗೇದರ್ ರಿಲೇಷನ್ಶಿಪ್ನಲ್ಲಿದ್ದರು. ಇಬ್ಬರು ಯೋಚಿಸಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಇದನ್ನು ಹಾರ್ದಿಕ್ ಫೋನ್ ಮೂಲಕ ಭಾರತದಲ್ಲಿದ್ದ ತನ್ನ ಫೋಷಕರಿಗೆ ತಿಳಿಸಿದ್ದಾನೆ. ಪೋಷಕರು ಮಗನ ಲವ್ಸ್ಟೋರಿಗೆ ಓಕೆ ಎಂದಿದ್ದಾರೆ.
ಕಳೆದ ವಾರ ಉತ್ತರಪ್ರದೇಶದ ತನ್ನ ತವರಿಗೆ ಬಂದಿದ್ದ ಹಾರ್ದಿಕ್, ಗೇಬ್ರಿಯೆಲಾಳನ್ನ ಭಾರತದ ಹಿಂದೂ ಸಂಪ್ರದಾಯದಂತೆ ನವೆಂಬರ್ 29 ರಂದು ಮದುವೆಯಾಗಿದ್ದಾನೆ.
ತನ್ನ ಪೂರ್ವಜರು ಉತ್ತರ ಪ್ರದೇಶದ ಫತೇಪುರ ಮೂಲಕ್ಕೆ ಸೇರಿದ್ದವರು. ಹೀಗಾಗಿ ಅಲ್ಲೇ ಆಕೆಯನ್ನು ವಿವಾಹವಾಗಿದ್ದಾನೆ. ಡಚ್ನ ಬ್ಯೂಟಿಯನ್ನು ಮದುವೆಯಾದ ಸಂಭ್ರಮದಲ್ಲಿರುವ ಹಾರ್ದಿಕ್, ಡಿಸೆಂಬರ್ 3 ರಂದು ಸದ್ಯ ವಾಸವಿರುವ ಗುಜರಾತ್ನ ಗಾಂಧಿನಗರಕ್ಕೆ ತೆರಳಿ ಅಲ್ಲಿ ಡಿಸೆಂಬರ್ 11 ರಂದು ರಿಸೆಪ್ಷನ್ ಮಾಡಿಕೊಳ್ಳಲಿದ್ದಾರೆ. ಈ ಆರತಕ್ಷತೆಗಾಗಿಯೇ ನೆದರ್ಲ್ಯಾಂಡ್ನಿಂದ ಗೇಬ್ರಿಯೆಲಾಳ ಪೋಷಕರು ಹಾಗೂ ಸಂಬಂಧಿಕರು ಭಾರತಕ್ಕೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಭಾರತದಲ್ಲಿ ಮದುವೆ ಸಂಭ್ರಮ ಮುಗಿದ ಮೇಲೆ ಇಬ್ಬರು ಮತ್ತೆ ಕುಟುಂಬಸ್ಥರ ಜೊತೆ ಡಿಸೆಂಬರ್ 25 ರಂದು ನೆದರ್‌ಲ್ಯಾಂಡ್‌ಗೆ ಹಿಂತಿರುಗಲಿದ್ದಾರೆ. ಅಲ್ಲಿ ಅವರು ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.