ಪುತ್ತೂರು: ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಶಂಕರ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿಯಾಗಿದ್ದು ಅರಿಯಡ್ಕ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆ ಮಾಡಿಕೊಂಡವರು.
ಬಂಗ್ಲೆಗುಡ್ಡೆ ಮನೆಯ ಶಂಕರ ಅವರು ಸುಮಾರು 5 ವರ್ಷಗಳ ಹಿಂದೆ ದೋಳಂತೋಡಿ ಎಂಬಲ್ಲಿ ಜಾಗ ಖರೀದಿ ಮಾಡಿ ಸೊಸೈಟಿ ಮತ್ತು ಇತರ ಸಂಘಗಳಲ್ಲಿ ಸಾಲ ಮಾಡಿದ್ದರು. ಇತ್ತೀಚೆಗೆ ಸಾಲದ ಬಗ್ಗೆ ಹಾಗೂ ಅದನ್ನು ಕಟ್ಟುವ ಬಗ್ಗೆ ಯೋಚನೆ ಮಾಡುತ್ತಿದ್ದು ಜೀವನದಲ್ಲಿ ಜಿಗುಪ್ಸೆ ಹೊಂದಿ ಡಿ.3ರಂದು ಮನೆಯವರು ಮಲಗಿದ್ದಾಗ ರೂಮಿನ ಬಾಗಿಲನ್ನು ಹೊರಗಡೆಯಿಂದ ಚಿಲಕ ಹಾಕಿ ಮನೆಯ ಎದುರಿನ ಬಾಗಿಲ ಚಿಲಕ ಹಾಕಿ ಮನೆಯ ಒಳಗಡೆ ಬೈರಸ್ ನ ಒಂದು ತುದಿಯನ್ನು ಅಡ್ಡಕ್ಕೆ ಬಿಗಿದು ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಿಗ್ಗೆ ಎದ್ದು ನೋಡಿದಾಗ ಬಾಗಿಲು ಹಾಕಿತ್ತು. ಫೋನ್ ಮಾಡಿದಾಗ ರಿಂಗ್ ಆಗುವುದು ಕೇಳುತ್ತಿತ್ತು. ನಂತರ ನೆರೆ ಮನೆಯ ರಾಜೇಶ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಲಾಗಿದೆ. ಅವರು ಬಂದು ಬಾಗಿಲು ತೆಗೆಸಿ ಹೊರ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಸೊಂಟದಲ್ಲಿ ನನ್ನ ಸಾವಿಗೆ ನಾನೇ ಕಾರಣ ಕ್ಷಮಿಸು ವನಿತಾ ಮಕ್ಕಳನ್ನು ನೋಡಿಕೋ ಎಂಬುದಾಗಿ ಡೆತ್ ನೋಟ್ ಬರೆದಿದ್ದು ಕಂಡು ಬಂದಿದೆ. ಶಂಕರ ರವರು ವೀಪರಿತ ಸಾಲ ಮಾಡಿ ಸಾಲವನ್ನು ಕಟ್ಟಲಾಗದೆ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ವನಿತಾ ನೀಡಿದ ದೂರಿನಂತೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.




























