ಪುಂಜಾಲಕಟ್ಟೆ : ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕು ಕಾವಳಮೂಡೂರು ನಿವಾಸಿ ಮಹಮ್ಮದ್ ಶಮೀಮ್ ಎಂಬವರು ನೀಡಿರುವ ದೂರಿನ ಮೇರೆಗೆ ಮಹಮ್ಮದ್ ಫಜೀಮ್, ಮಹಮ್ಮದ್ ಇಮ್ರಾನ್, ಇರ್ಫಾನ್ ಬೊಂಬಿಕ್ಕು, ಹಂಝ ಆಲಂಗಾಲು, ರಹೀಂ ಧೂಮಳಿಕೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಶಮೀಮ್ ಎಂಬವರು ಡಿ.7 ರಂದು ಬೆಳಿಗ್ಗೆ ನೆರೆಕರೆಯ ಸ್ನೇಹಿತರೊಂದಿಗೆ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾವಳಕಟ್ಟೆ ಬಸ್ ನಿಲ್ದಾಣದ ಬಳಿಯಿದ್ದಾಗ ಪರಿಚಯದ ಮಹಮ್ಮದ್ ಫಜೀಮ್, ಮಹಮ್ಮದ್ ಇಮ್ರಾನ್, ಇರ್ಪಾನ್ ಬೊಂಬಿಕ್ಕು , ಹಂಝ ಆಲಂಗಾಲು , ರಹೀಂ ಧೂಮಳಿಕೆ ಎಂಬವರುಗಳು ಅಲ್ಲಿಗೆ ಬಂದು, ಶಮೀಮ್ ರನ್ನು ಅಂಗಡಿಯಿಂದ ಹೊರಗೆ ಕರೆದು, ಹಿಂದಿನ ದಿನ ತರಕಾರಿ ಹನೀಫ್ ಎಂಬವರಿಗೆ ಸಂಬಂಧಿಸಿ ನಡೆದಿದ್ದ ಮಾತುಕತೆಯ ಬಗ್ಗೆ ತಕರಾರು ತೆಗೆದು, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಲ್ಲದೆ, ಮಹಮ್ಮದ್ ಫಜೀಮ್ ಮತ್ತು ಇರ್ಪಾನ್ ಬೊಂಬಿಕ್ಕು ಮತ್ತು ಮಹಮ್ಮದ್ ಇಮ್ರಾನ್ ಅವರು ತಂದಿದ್ದ ಪಂಚ್ ನಿಂದ ಹಾಗೂ ರಾಡ್ ನಿಂದ ಹಲ್ಲೆ ನಡೆಸಿರುತ್ತಾರೆ.
ಶಮೀಮ್ ಜೊತೆಗಿದ್ದವರು ಪ್ರತಿರೋಧಿಸಿದಾಗ, ಅವರಿಗೂ ಕೂಡಾ ಪಂಚ್ ನಿಂದ ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಸ್ಥಳದಲ್ಲಿ ಜನರು ಸೇರುವುದನ್ನು ಕಂಡು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ: 109/2023, ಕಲಂ: 143, 147, 148, 323, 324, 504, 506, ಜೊತೆಗೆ 149 ಭಾದಂಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























