ಹಾಸನ : ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಅಂಬಾರಿ ಆನೆ ಅರ್ಜುನ ಸಾವಿಗೀಡಾಗಿತ್ತು. ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೌರವ ಸಲ್ಲಿಸಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿರುವ ಅರ್ಜುನನ ಸಮಾಧಿಗೆ ಭೇಟಿ ನೀಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಪೂಜೆ ಸಲ್ಲಿಸಿದ್ದಾರೆ. ಅರ್ಜುನನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಹಿನ್ನೆಲೆ ದಂಪತಿ ಸಮೇತರಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.

ಡಿ.5 ರಂದು ಮೈಸೂರು ಅರಮನೆಯ ಪುರೋಹಿತರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿದ್ದು, ಈ ವೇಳೆ ಯದುವೀರ್ ಅವರು ಅರಮನೆಯಿಂದ ಪೂಜಾ ಸಾಮಾಗ್ರಿ, ಹಾರ, ಶಾಲು ಕೊಟ್ಟು ಕಳಿಸಿದ್ದರು.

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿಗಳ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


























