ಮಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರೋ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿ ಇಡ್ತಿರೋ ಅಚ್ಚರಿಯ ಹೆಜ್ಜೆಗಳು ಕುತೂಹಲ ಮೂಡಿಸಿವೆ. ಇದೀಗ ಹಿಂದುತ್ವದತ್ತ ಕುಮಾರಸ್ವಾಮಿ ಹೆಜ್ಜೆ ಇಟ್ಟಿದ್ದಾರೆ. ಜೈ ಶ್ರೀರಾಮ್ ಎಂದಿದ್ದಾರೆ. ಹೆಚ್ಡಿಕೆ ಹೊಸ ದಿಕ್ಕಿನ ನಡೆ ರಾಜಕೀಯ ರಂಗಮಂಟಪದಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದೆ.
ಕಮಲದಳ ಮೈತ್ರಿಯಾಗಿ ಲೋಕ ಸಮರ ಗೆಲ್ಲಲು ಸಜ್ಜಾಗಿವೆ. ಈಗಾಗ್ಲೆ ಲೋಕ ಸಂಚಾರ ಆರಂಭಿಸಿರೋ ಬಿಜೆಪಿ-ಜೆಡಿಎಸ್ ನಾಯಕರು ದೋಸ್ತಿ ದೋಸ್ತಿ ಅಂತ ದರ್ಬಾರ್ ಶುರುಮಾಡಿದ್ದಾರೆ. ಕಮಲ್ ದೋಳ್ ದಳ ಅಂತ ಕಮಾಲ್ ಮಾಡಲು ಮುಂದಾಗಿರೋ ಹೆಚ್ಡಿಕೆ ಲೋಕಸಭಾ ಚುನಾವಣೆ ಗೆಲ್ಲಲು ಭರ್ಜರಿ ಶಸ್ತ್ರಾಭ್ಯಾಸಕ್ಕೆ ಸನ್ನದ್ಧರಾಗಿದ್ದಾರೆ. ಈ ಮಧ್ಯೆ ಕಡಲತಡಿ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಹೆಚ್ಡಿಕೆ ಕಾಣಿಸಿಕೊಂಡು ಅಚ್ಚರಿ ಸಹ ಮೂಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಕೆಲ ನಡೆಗಳು ಬಿಜೆಪಿ ಅಜೆಂಡಾವನ್ನ ಒಪ್ಪಿಕೊಂಡ್ರಾ ಅನ್ನೋ ಚರ್ಚೆಗಳನ್ನ ಹುಟ್ಟುಹಾಕಿವೆ.
ಅಕ್ಕ-ಪಕ್ಕ ಕುಳಿತು ಉಭಯ ನಾಯಕರ ದೋಸ್ತಿ
ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾಗವಹಿಸಿದ್ರು. ಅಲ್ಲದೇ ಇದೇ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಬಸನಗೌಡ ಪಟೀಲ್ ಯತ್ನಾಳ್ ಸಹ ಪಾಲ್ಗೊಂಡಿದ್ರು. ವೇದಿಕೆಯಲ್ಲಿ ಅಕ್ಕ-ಪಕ್ಕವೇ ಕುಳಿತು ಕ್ರೀಡೋತ್ಸವ ವೀಕ್ಷಿಸಿದ ನಾಯಕರು, ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿಡಿದ ಕೈಗನ್ನಡಿಯಂತೆ ಪಳ ಪಳ ಅಂತ ಮಿಂಚುತ್ತಿದ್ರು..

ಜೈ ಶೀರಾಮ್ ಘೋಷಣೆ ಕೂಗಿ ಹೆಚ್ಡಿಕೆ ಅಚ್ಚರಿಯ ನಡೆ
ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದ ಹೆಚ್.ಡಿ ಕುಮಾರಸ್ವಾಮಿ ಗುರುಕುಲ ಪರಂಪರೆಯ ಸಂಸ್ಕೃತಿಯನ್ನ ಹಾಡಿ ಹೊಗಳಿದ್ರು. ಮಕ್ಕಳಿದ್ದಾಗ ರಾಮನ ಭಜನೆ ಮಾಡಿದನ್ನು ಇವತ್ತು ಮತ್ತೆ ನೆನಪಿಸಿದ್ದೀರಿ ಅಂತ ರಾಮನ ಜಪ ಸಹ ಮಾಡಿದ್ರು. ನನ್ನನ್ನು ಕೆಲವರು ದಾರಿ ತಪ್ಪಿಸುವ ಮಾಹಿತಿ ನೀಡಿದ್ರು, ಇವತ್ತು ನನ್ನ ಕಣ್ಣು ತೆರೆದಿದೆ. ನನ್ನಲ್ಲಿ ತಪ್ಪುಗಳಾಗಿದೆ, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಭಾಷಣದ ಕೊನೆಗೆ ಜೈ ಶೀರಾಮ್ ಘೋಷಣೆ ಮೊಳಗಿಸಿ ಹೊಸ ಪುಳಕವನ್ನೇ ಹುಟ್ಟಿಸಿದ್ರು.
ಸರಳ ಸಜ್ಜನಿಕೆ ವ್ಯಕ್ತಿ ಹೆಚ್.ಡಿ.ಕುಮಾರಸ್ವಾಮಿ ಅಂತ ಮೆಚ್ಚುಗೆ
ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನ ಉದ್ದೇಶಿಸಿ ಮಾತನಾಡಿದ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹೆಚ್ಡಿಕೆಯನ್ನ ಹಾಡಿಹೊಗಳಿದ್ರು. ಕುಮಾರಸ್ವಾಮಿ ಅವರ ಇಡೀ ಕುಟುಂಬ ದೇಶಕ್ಕೋಸ್ಕರ ಸೇವೆ ಮಾಡಿದೆ. ಹೆಚ್ಡಿಕೆ ಎರಡು ಬಾರಿ ರಾಜ್ಯವನ್ನ ಮುನ್ನಡೆಸಿದ್ದಾರೆ. ಕುಮಾರಣ್ಣ ಅಂತಾನೇ ಜನರು ಅವರನ್ನ ಕರೀತಾರೆ, ಸರಳ ಸಜ್ಜನಿಕೆಯ ವ್ಯಕ್ತಿ ಹೆಚ್.ಡಿ. ಕುಮಾರಸ್ವಾಮಿ ಅಂತ ಗುಣಗಾನ ಮಾಡಿದರು.
ಕಾರ್ಯಕ್ರಮದುದ್ದಕ್ಕೂ ಹೆಚ್ಡಿಕೆ ಹಿಂದುತ್ವವನ್ನ ಒಪ್ಪಿ, ಅಪ್ಪಿಕೊಂಡವರಂತೆ ನಡೆದುಕೊಂಡಿದ್ದು ಅಚ್ಚರಿಗೆ ಕಾರಣವಾಯ್ತು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಹಿಂದುತ್ವದ ಬಗ್ಗೆ ಹೆಚ್ಡಿಕೆ ಹೊಂದಿರೋ ಸಾಫ್ಟ್ ಕಾರ್ನರ್ ಹೊಸ ದಿಕ್ಕಿನ ಚರ್ಚೆಗೆ ದಿಕ್ಸೂಚಿಯಾದಂತಿತ್ತು. ಹಿಂದುತ್ವವನ್ನ ಹೊದ್ದು ಲೋಕ ಸಮರವನ್ನ ಗೆಲ್ಲುವ ರಣತಂತ್ರವನ್ನ ಹೆಚ್ಡಿಕೆ ಹೆಣೆದಿದ್ದಾರಾ ಅನ್ನೋ ಬಿಸಿ ಬಿಸಿ ಚರ್ಚೆಯೂ ಶುರುವಾಗಿದೆ..


























