ಬೆಂಗಳೂರು : 18 ವರ್ಷಗಳ ಹಿಂದೆ ತಲೆಯೊಳಗೆ ಹೊಕ್ಕಿದ್ದ ಗುಂಡು (ಬುಲೆಟ್) ಅನ್ನು ಬೆಂಗಳೂರು ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ. ಆಪರೇಷನ್ ಮಾಡಿ ತೆಗೆದ ಬುಲೆಟ್ ಸುಮಾರು 3 ಸೆಂ.ಮೀಟರ್ ಉದ್ದ ಇದೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಯೆಮೆನ್ ದೇಶದವರು. 29 ವರ್ಷದ ಆ ವ್ಯಕ್ತಿಗೆ 18 ವರ್ಷಗಳ ಹಿಂದೆ ಗುಂಡಿನ ದಾಳಿಗೆ ಒಳಗಾಗಿದ್ದರು. ಪರಿಣಾಮ ಅವರು ಕಿವುಡರಾದರು. ಜೊತೆಗೆ ಆಗಾಗ ವಿಪರೀತ ತಲೆನೋವು ಬರುವುದರ ಜೊತೆಗೆ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಇದನ್ನು ಬರೋಬ್ಬರಿ 18 ವರ್ಷಗಳಿಂದ ಸಹಿಸಿಕೊಂಡು ಬಂದಿದ್ದರು.
ಗುಂಡು ಹೇಗೆ ಹೊಕ್ಕಿತ್ತು..?
ಆರು ಸಹೋದರರು ಮತ್ತು ಮೂವರು ಸಹೋದರಿಯರ ಜೊತೆ ರಮೇಶ್ ಯೆಮೆನ್ನ ಒಂದು ಹಳ್ಳಿಯಲ್ಲಿ ಬೆಳೆದರು. ಅವರ ತಂದೆ ಕೃಷಿಕರಾಗಿದ್ದರು, ತಾಯಿ ಗೃಹಿಣಿಯಾಗಿದ್ದರು. ಅವರ ನಿವಾಸದ ಸಮೀಪವೇ ಜಮೀನು ಇತ್ತು. ಅಲ್ಲಿ ಅವರು ಈರುಳ್ಳಿ, ಟೊಮ್ಯಾಟೋ, ಆಲೂಗಡ್ಡೆ, ಬೆಳ್ಳುಳ್ಳಿ ಮತ್ತು ಕ್ಯಾರೆಟ್ಗಳನ್ನು ಬೆಳೆಯುತ್ತಿದ್ದರು.
ರಮೇಶ್ ಸಣ್ಣವರಿದ್ದಾಗ ತಮ್ಮ ತಂದೆ ಜೊತೆ ಗಿಡಗಳಿಗೆ ನೀರು ಹಾಯಿಸಲು, ಗೊಬ್ಬರ ಹಾಕಲು ಆಗಾಗ ಹೋಗುತ್ತಿದ್ದರು. ಅವರು 10ನೇ ವರ್ಷದಲ್ಲಿದ್ದಾಗ ಸಂಕಷ್ಟಕ್ಕೆ ಸಿಲುಕಿದರು. ಒಂದು ದಿನ ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಎರಡು ಎದುರಾಳಿ ಗುಂಪುಗಳ ನಡುವಿನ ಜಗಳದಲ್ಲಿ ಸಿಕ್ಕಿಬಿದ್ದಿದ್ದರು. ಮಾಧ್ಯಮವೊಂದಕ್ಕೆ ಅವರು ನೀಡಿರುವ ಹೇಳಿಕೆ ಪ್ರಕಾರ.. ಆ ಜಗಳದಲ್ಲಿ ನನ್ನ ತಲೆಗೆ ಗುಂಡು ಹೊಕ್ಕಿತ್ತು. ನನಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಗಾಯವನ್ನು ಸ್ವಚ್ಛ ಮಾಡಿ ಔಷಧಿ ಹಚ್ಚಿ ಕಳುಹಿಸಿದ್ದರು. ಆದರೆ ತಲೆಯೊಳಗೆ ಹೊಕ್ಕಿದ್ದ ಗುಂಡನ್ನು ತೆಗೆಯಲು ಅವರು ಮನಸು ಮಾಡಿರಲಿಲ್ಲ. ಇದರಿಂದ ನಾನು ಕಿವಿಯ ಸೋಂಕಿಗೆ ಒಳಗಾದೆ. ವಿಪರೀತ ತಲೆ ನೋವು ಬರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.
ನಂತರ ನಾನು ಬೆಂಗಳೂರಿನ ಆಸ್ಟರ್ ಆಸ್ಪತ್ರೆ ಬಗ್ಗೆ ತಿಳಿದುಕೊಂಡೆ. ಅದರಂತೆ ಶಸ್ತ್ರ ಚಿಕಿತ್ಸೆ ಮಾಡಿಸಲು ಬೆಂಗಳೂರಿಗೆ ಬಂದೆ. ವೈದ್ಯರು ಶಸ್ತ್ರಚಿಕಿತ್ಸೆ ಕಷ್ಟದ ಕೆಲಸ ಎಂದು ಅರಿತುಕೊಂಡರು. ಆದರೂ ಧೈರ್ಯ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿದರು ಎಂದಿದ್ದಾರೆ.
ವೈದ್ಯರು ಹೇಳಿದ್ದೇನು..?
ಆಸ್ಟರ್ ಆಸ್ಪತ್ರೆಯ ಇಎನ್ಟಿ ಮತ್ತು ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿಯ ಮುಖ್ಯ ಸಲಹೆಗಾರ ಡಾ.ರೋಹಿತ್ ಉದಯ್ ಪ್ರಸಾದ್ ಹೇಳುವ ಪ್ರಕಾರ, ಮೊದಲು ನಾವು ಎಂಆರ್ಐ ಸ್ಕ್ಯಾನ್ ಮಾಡಿ ಏನಾಗಿದೆ ಎಂದು ತಿಳಿದುಕೊಂಡೆವು. ಆಪರೇಷನ್ ಮಾಡೋದು ಈಜಿ ಇಲ್ಲ ಎಂದು ನಾವು ಅರಿತುಕೊಂಡೆವು. ಆಪರೇಷನ್ ಮಾಡೋದು ನಮಗೆ ಸವಾಲಿನ ಕೆಲಸ ಆಗಿತ್ತು. ಬುಲೆಟ್ ತೆಗೆದ ಬಳಿಕ ರಕ್ತಸ್ರಾವ ಆಗುವ ಸಾಧ್ಯತೆ ಜಾಸ್ತಿ ಇತ್ತು. ನಾವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಇದೀಗ ರಮೇಶ್ ಅವರಿಗೆ ನೋವು ಕಡಿಮೆಯಾಗಿದೆ. ಜೊತೆಗೆ ಕಿವಿಯೂ ಕೂಡ ಸರಿಯಾಗಿ ಕೇಳಿಸುವಂತೆ ಮಾಡಿದ್ದೇವೆ. ಶಸ್ತ್ರ ಚಿಕಿತ್ಸೆ ಬಳಿಕ ರಮೇಶ್ ಯೆಮೆನ್ಗೆ ವಾಪಸಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.