ತಿರುವನಂತಪುರಂ : ಕೇರಳದ ಅಯ್ಯಪ್ಪನ ಪ್ರಸಿದ್ಧ ದೇವಾಲಯವಾದ ಶಬರಿಮಲೆ ದೇಗುಲಕ್ಕೆ ಈ ವರ್ಷ ಭಾರೀ ಜನಸಂದಣಿ ಕಂಡು ಬರುತ್ತಿದ್ದು, ಮೂಲಭೂತ ಸೌಕರ್ಯಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಯಾತ್ರಾರ್ಥಿಗಳು ದೂರಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು, ತ್ರಿಶೂರ್, ಕೋಯಿಕ್ಕೋಡ್ ಮತ್ತು ಮಲಪ್ಪುರಂ ಮುಂತಾದ ಸ್ಥಳಗಳಿಂದ ಯಾತ್ರಾರ್ಥಿಗಳ ಭಾರೀ ದಟ್ಟಣೆಯನ್ನು ಪರಿಗಣಿಸಿ, ಹಲವಾರು ಭಕ್ತರು ತಮ್ಮ ದೇಗುಲದ ಪ್ರವಾಸವನ್ನು ನಿಲ್ಲಿಸಿ ಮನೆಗೆ ಮರಳಿದರು ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪೊಲೀಸರು ವಾಹನಗಳನ್ನು ತಡೆದ ನಂತರ ಪ್ರವಾಸಿಗರನ್ನು ಗಂಟೆಗಳ ಕಾಲ ಕಾಯುವಂತೆ ಮಾಡಲಾಗಿತ್ತು ಎಂದು ವರದಿಯಾಗಿದೆ.
ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರ್ತಿದೆ. ದೀಕ್ಷೆ ಪಡೆದ ಅಯ್ಯಪ್ಪ ಮಾಲಾಧಾರಿಗಳಂತೂ ಸ್ವಾಮಿಯ ದರ್ಶನಕ್ಕೆ ಪರದಾಡುತ್ತಿದ್ದಾರೆ. ಸತತ 20 ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತರೂ ಅಯ್ಯಪ್ಪ ಸ್ವಾಮಿಯ ದರ್ಶನ ಸಿಗುತ್ತಿಲ್ಲ. ದರ್ಶನ ತಡವಾಗುತ್ತಿರೋದ್ರಿಂದ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು ಬೇರೆ ದಾರಿಯಿಲ್ಲದೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯದೇ ವಾಪಸ್ ಆಗುತ್ತಿದ್ದಾರೆ.
ಮಕರ ಸಂಕ್ರಮಣಕ್ಕೂ ಮುನ್ನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯೋದು ಭಕ್ತರ ಮಹದಾಸೆಯಾಗಿದೆ. ಹೀಗಾಗಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಪಂಪಾದಿಂದ ಶಬರಿಮಲೆವರೆಗೂ ಭಕ್ತರು ಕಿಕ್ಕಿರಿದು ಸೇರಿದ್ದು ಸುಮಾರು 8 ಕಿಲೋಮೀಟರ್ ವರೆಗೆ ಕ್ಯೂ ನಿಂತಿದ್ದಾರೆ. ಎರಡು ತಿಂಗಳುಗಳ ಕಾಲ ದರ್ಶನಕ್ಕೆಂದು ದೇವಸ್ಥಾನದ ಬಾಗಿಲು ತೆರೆದು ತಿಂಗಳು ಕಳೆಯುತ್ತಾ ಬಂದರೂ ಸಹ ದರ್ಶನಕ್ಕೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಶಬರಿಮಲೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಶಬರಿಮಲೆಯಲ್ಲಿ ಭಕ್ತರ ದಟ್ಟಣೆಗೆ ಕಾರಣಗಳು
ಕೇರಳದ ಶಬರಿಮಲೆಗೆ ಮೊದಲ ಎರಡು ವಾರ ನಿತ್ಯ 50 ಸಾವಿರದಷ್ಟು ಭಕ್ತಾದಿಗಳು ಭೇಟಿ ಕೊಡುತ್ತಿದ್ದರು. ಡಿಸೆಂಬರ್ 7ರ ನಂತರ ಭಕ್ತಾದಿಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಆಗಿದೆ. ಚೆನ್ನೈ ಪ್ರವಾಹದ ಕಾರಣಕ್ಕಾಗಿ ಅನೇಕ ರೈಲುಗಳ ಸಂಚಾರ ರದ್ದಾಗಿದ್ದು ಇದಕ್ಕೆ ಮುಖ್ಯ ಕಾರಣವಾಗಿದೆ.
ಡಿಸೆಂಬರ್ 7ರವರೆಗೆ ಕೇರಳಕ್ಕೆ ಹೋಗುತ್ತಿದ್ದ ರೈಲುಗಳ ಸಂಚಾರ ರದ್ದಾಗಿತ್ತು. ಮಿಚಾಂಗ್ ಚಂಡಮಾರುತದ ಪ್ರವಾಹ ಮುಗಿದ ಬಳಿಕ ಕೇರಳಕ್ಕೆ ಆಗಮಿಸುವ ಅಯ್ಯಪ್ಪ ಮಾಲಾಧಾರಿಗಳ ಸಂಖ್ಯೆ ಭಾರೀ ಏರಿಕೆಯಾಗಿದೆ. ಇದರಿಂದ ಶಬರಿಮಲೆಯಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಳವಾಗಿದೆ. ಇದರ ಜೊತೆಗೆ ತೆಲಂಗಾಣ ಚುನಾವಣೆ, ಮತ ಎಣಿಕೆ ಬಳಿಕ ಶಬರಿಮಲೆಗೆ ಭಕ್ತಾದಿಗಳ ಸಂಖ್ಯೆ ಏರಿಕೆಯಾಗಿದೆ. ಬೇರೆ ಬೇರೆ ರಾಜ್ಯಗಳಿಂದ ತೆಲಂಗಾಣಕ್ಕೆ ವೋಟಿಂಗ್ಗೆ ಬಂದವರು, ವೋಟಿಂಗ್ ಮುಗಿದ ಬಳಿಕ ಶಬರಿಮಲೆಗೆ ಭೇಟಿ ಕೊಟ್ಟಿದ್ದಾರೆ.
ಶಬರಿಮಲೆಯಲ್ಲಿ ಓರ್ವ ಬಾಲಕ ತನ್ನ ತಂದೆಯನ್ನ ಕಳೆದುಕೊಂಡು ಪರದಾಡಿದ ವಿಡಿಯೋ ವೈರಲ್ ಆಗಿದೆ. ಮಾಲಾಧಾರಿಯಾದ ಬಾಲಕ ತನ್ನ ತಂದೆಗಾಗಿ ಗೋಳಾಡುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶಬರಿಮಲೆ ಅವ್ಯವಸ್ಥೆಗೆ ಕಾರಣವೇನು..!?
ಶಬರಿಮಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾದ್ದಂತೆ ಪರದಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಪಂಪಾ, ನೀಲಕಲ್, ದೇವಾಲಯ ಸನ್ನಿಧಾನದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ದರ್ಶನಕ್ಕೆ ಬುಕ್ಕಿಂಗ್ ಮಾಡಿದವರನ್ನ ಹೊರತುಪಡಿಸಿ ಬೇರೆಯವರು ದರ್ಶನದ ಸಾಲಿಗೆ ಸೇರ್ಪಡೆಯಾಗುತ್ತಿದ್ದಾರೆ. ಇದರಿಂದ ಭಕ್ತಾದಿಗಳ ಮಧ್ಯೆ ನೂಕು ನುಗ್ಗಲು ಹೆಚ್ಚಾಗಿದೆ. ಶಬರಿಮಲೆಯಲ್ಲಿ ಪೊಲೀಸರಿಂದ ಸರಿಯಾದ ಪ್ಲ್ಯಾನಿಂಗ್ ಇಲ್ಲ. ಸಮನ್ವಯದಿಂದ ಕಾರ್ಯನಿರ್ವಹಣೆ ಮಾಡದ ಪೊಲೀಸರಿಂದ ಅವ್ಯವಸ್ಥೆ ನಿರ್ಮಾಣವಾಗಿದೆ.
ಶಬರಿಮಲೆಯಲ್ಲಿ ಹೆಚ್ಚಾದ ಭಕ್ತಾದಿಗಳಿಗೆ ಸೂಕ್ತ ಸೌಲಭ್ಯ ಒದಗಿಸಲು ಕೇರಳ ಹೈಕೋರ್ಟ್ ಇದೀಗ ಸೂಕ್ತ ನಿರ್ದೇಶನ ನೀಡಿದೆ. ವಾಹನಗಳಿಗೆ ಸೂಕ್ತ ಪಾರ್ಕಿಂಗ್ ಸೌಲಭ್ಯ ಒದಗಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಶಬರಿಮಲೆ ದೇವಾಲಯದಲ್ಲಿ ಭಕ್ತಾದಿಗಳ ದಟ್ಟಣೆ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಿ. ಭಕ್ತಾದಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ. ಪಂಪಾ, ದೇವಾಲಯ ಸನ್ನಿಧಾನದಲ್ಲಿ ಭಕ್ತಾದಿಗಳ ದಟ್ಟಣೆ ಕಾರಣಕ್ಕಾಗಿ ವಾಹನಗಳಿಗೆ ತಡೆ ನೀಡಲಾಗಿದೆ.
In Kerala, with taxpayers money,
— Anoop Antony (@AnoopKaippalli) December 13, 2023
– CM & his ministers enjoy foreign trips
– Common people get this 👇🏻#Sabarimala pic.twitter.com/fwTvezk4Qc


























