ಪುತ್ತೂರು : ನಗರಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ನಿಂದ ನಗರಸಭೆಯ ವಾರ್ಡ್ 1ರ ಅಭ್ಯರ್ಥಿಯಾಗಿ ದಿನೇಶ್ ಶೇವಿರೆ ಹಾಗೂ ಅದೇ ರೀತಿ ನಗರಸಭೆಯ ವಾರ್ಡ್ 11ರ ಅಭ್ಯರ್ಥಿಯಾಗಿ ದಾಮೋದರ ಭಂಡಾರ್ಕರ್ ರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ ಅವರು ತಿಳಿಸಿದ್ದಾರೆ.
ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಡಿ.8 ರಂದು ಜಿಲ್ಲಾಧಿಕಾರಿಗಳು ಅದಿಸೂಚನೆ ಪ್ರಕಟಗೊಳಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಡಿ.15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.
ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಡಿ.29ರಂದು ಮರುಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ನಗರ ಸಭಾ ವ್ಯಾಪ್ತಿ ಹಾಗೂ ಉಪ ಚುನಾವಣೆ ನಡೆಯುವ ವಾರ್ಡ್ ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಡಿ.8 ರಿಂದ 30 ರ ತನಕ ಜಾರಿಯಲ್ಲಿರಲಿದೆ.

























