ಫ್ರಾನ್ಸ್ : 10 ದಿನಗಳ ಕಾಲ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದ ಮಹಿಳೆ ಹೊರಬರುವಾಗ ತಾಯಿಯಾಗಿರೋ ಅಪರೂಪದ ಘಟನೆ ಫ್ರಾನ್ಸ್ನಲ್ಲಿ ನಡೆದಿದೆ.
37 ವರ್ಷದ ಮಹಿಳೆಯೊಬ್ಬರು ತನಗೆ ಅರಿವಿಲ್ಲದೇ 23 ವಾರಗಳ ಗರ್ಭಿಣಿಯಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ನಂತರ ತನ್ನ ಕರುಳಿನಲ್ಲಿ ಮಗುವಿನ ಬೆಳವಣಿಗೆ ಆಗಿರುವುದು ಪತ್ತೆಯಾಗಿದೆ. ಫ್ರಾನ್ಸ್ನಲ್ಲಿ ನಡೆದಿರೋ ಈ ಘಟನೆ ವೈದ್ಯಕೀಯ ಲೋಕಕ್ಕೆ ಅಚ್ಚರಿ ಮೂಡಿಸಿದೆ.
ಫ್ರಾನ್ಸ್ನ ಈ ಮಹಿಳೆ ಹೊಟ್ಟೆಯಲ್ಲಿ 23 ವಾರಗಳ ಕಾಲ ಮಗು ಬೆಳವಣಿಗೆಯಾದರೂ ಆಕೆಗೆ ಗೊತ್ತಾಗಿಲ್ಲ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು, 29ನೇ ವಾರಕ್ಕೆ ಹೈರಿಸ್ಕ್ ತೆಗೆದುಕೊಂಡ ನುರಿತ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ತಾಯಿ, ಮಗು ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ ಎನ್ನಲಾಗಿದೆ.
ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಈ ಅಪರೂಪದ ವೈದ್ಯಕೀಯ ಚಿಕಿತ್ಸೆಯನ್ನು ದಾಖಲಿಸಲಾಗಿದೆ. ವೈದ್ಯಕೀಯ ತಜ್ಞರು ಹೇಳುವ ಪ್ರಕಾರ ಫ್ರಾನ್ಸ್ನ ಈ ಮಹಿಳೆಯ ಸ್ಥಿತಿಯನ್ನು ಅಪ್ಡೊಮಿನಲ್ ಎಕ್ಟೊಪಿಕ್ ಪ್ರೆಗ್ನೆನ್ಸಿ ಎಂದು ಗುರುತಿಸಲಾಗಿದೆ. ಮಹಿಳೆಯ ಗರ್ಭಾಶಯದ ಹೊರಗೆ, ಕಿಬ್ಬೊಟ್ಟೆಯ ಕುಹರದೊಳಗೆ ಫಲವತ್ತಾದ ಮೊಟ್ಟೆಯನ್ನು ಹೊಂದಿದ್ದಾಗ ಈ ಅಪರೂಪದ ವಿದ್ಯಮಾನವು ಸಂಭವಿಸುತ್ತದೆ. ಈ ಪ್ರಕರಣವು ಅನಿರೀಕ್ಷಿತ ಸ್ಥಳಗಳಲ್ಲಿ ಭ್ರೂಣಗಳು ಬೆಳೆಯುತ್ತಿರುವ ನಿದರ್ಶನಕ್ಕೆ ಸೇರುತ್ತದೆ ಎನ್ನಲಾಗಿದೆ.
ಈ ರೀತಿಯ ಗರ್ಭಧಾರಣೆ ಹೆಚ್ಚು ಅಪಾಯಕಾರಿಯಾದದ್ದು ಎಂದು ಚಿಕಿತ್ಸೆ ನೀಡಿದ ಫ್ರಾನ್ಸ್ ವೈದ್ಯರು ತಿಳಿಸಿದ್ದಾರೆ. ಈ ರೀತಿಯಾಗುವ ತಾಯಿಯಂದಿರು ಶೇಕಡಾ 90 ರಷ್ಟು ಮಗುವನ್ನು ಕಳೆದುಕೊಳ್ಳುವ ಅವಕಾಶವಿದೆ. ಒಂದು ವೇಳೆ ಬದುಕುಳಿದವರು ಮಿದುಳಿನ ಹಾನಿಯ ಸಾಧ್ಯತೆಯನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ತಾಯಿ, ಮಗುವಿನ ಆರೋಗ್ಯದ ಬಗ್ಗೆ ಮೂರು ತಿಂಗಳಲ್ಲಿ ಖಚಿತ ಮಾಹಿತಿ ತಿಳಿಯಬಹುದು ಎನ್ನಲಾಗಿದೆ.


























