ಪುತ್ತೂರು : ನಗರ ಸಭಾ ಸದಸ್ಯರಿಬ್ಬರ ಮರಣದಿಂದ ತೆರವಾದ ಎರಡು ಸ್ಥಾನಗಳಿಗೆ ಡಿ.27 ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಈಗಾಗಲೇ ಘೋಷಣೆಯಾಗಿದ್ದು, ಇಂದು ನಾಮಪತ್ರ ಸಲ್ಲಿಕೆ ನಡೆಯಲಿದೆ.
ಈ ಹಿನ್ನೆಲೆ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಮುಖರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಜೀವಂಧರ್ ಜೈನ್ ಸಹಿತ ಹಲವು ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ಈ ವೇಳೆ ಡಾ. ಸುರೇಶ್ ಪುತ್ತೂರಾಯ ರವರು ಉಪಸ್ಥಿತರಿದ್ದು, ಅಭ್ಯರ್ಥಿಗಳಿಗೆ ಹಾರ ಹಾಕಿ ಹಾರೈಸಿದರು.
ಬಿಜೆಪಿಯಿಂದ ವಾರ್ಡ್ 1ರ ಅಭ್ಯರ್ಥಿಯಾಗಿ ಸುನೀತಾ ಹಾಗೂ ವಾರ್ಡ್ 11ರ ಅಭ್ಯರ್ಥಿಯಾಗಿ ರಮೇಶ್ ರೈ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ನಗರ ಸಭೆಯ ವಾರ್ಡ್ 1 ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಶಕ್ತಿ ಸಿನ್ಹಾ ರವರ ನಿಧನದಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಡಿ.8 ರಂದು ಜಿಲ್ಲಾಧಿಕಾರಿಗಳು ಅದಿಸೂಚನೆ ಪ್ರಕಟಗೊಳಿಸಲಿದ್ದು, ಅದೇ ದಿನ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಡಿ.15 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಡಿ.16ರಂದು ನಾಮಪತ್ರ ಪರಿಶೀಲನೆ, ಡಿ.18ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಅಂತಿಮ ದಿನವಾಗಿದೆ.
ಡಿ.27 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಅವಶ್ಯವಿದ್ದರೆ ಡಿ.29ರಂದು ಮರುಮತದಾನ ನಡೆದು ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.


























