ಚೆನ್ನೈ : ಕಾನೂನು ಸಮರದಲ್ಲಿ ಕೊನೆಗೂ ಕರ್ನಾಟಕ ರಾಜ್ಯ ಸಾರಿಗೆ ನಿಗಮ ಗೆದ್ದಿದೆ. ಕೆ.ಎಸ್.ಆರ್.ಟಿ.ಸಿ ಟ್ರೇಡ್ ಮಾರ್ಕ್ ಕರ್ನಾಟಕದ ಪಾಲಾಗಿದ್ದು, ಕೇರಳ ಸಾರಿಗೆ ನಿಗಮ ಸಲ್ಲಿಸಿದ್ದ ಅರ್ಜಿ ವಜಾ ಮಾಡಲಾಗಿದೆ.
ಮದ್ರಾಸ್ ಹೈಕೋರ್ಟ್ನಲ್ಲಿ ಈ ಅರ್ಜಿ ವಿಚಾರಣೆ ನಡೆದಿದ್ದು, ಕರ್ನಾಟಕಕ್ಕೆ ಇನ್ಮುಂದೆ ಕೆ.ಎಸ್.ಆರ್.ಟಿ.ಸಿ ಪದ ಬಳಕೆಗೆ ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕೆ.ಎಸ್.ಆರ್.ಟಿ.ಸಿ ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರವನ್ನು ನೀಡಲು ಅರ್ಜಿ ಸಲ್ಲಿಸಿತ್ತು. ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣ ಪತ್ರಗಳನ್ನು ಕರ್ನಾಟಕ ಹೊಂದಿದೆ. ದಿನಾಂಕ 1.11.1973 ಯಿಂದ ಕೆ.ಎಸ್.ಆರ್.ಟಿ.ಸಿ ಟ್ರೇಡ್ ಮಾರ್ಕ್ ಅನ್ನೇ ಕರ್ನಾಟಕ ಬಳಸುತ್ತಾ ಬಂದಿದೆ. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್, ರವರಿಂದ ‘ಕೆ.ಎಸ್.ಆರ್.ಟಿ.ಸಿ’ ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗಾಗಿ ಕಾಪಿ ರೈಟ್ ಅನ್ನು ಸಹ ಪಡೆದಿದೆ.
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ ಮುಂದೆ ಕರ್ನಾಟಕದ ವಾದವನ್ನು ಪ್ರಶ್ನಿಸಿತ್ತು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸಂಸ್ಥೆಯು 42 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿ ಹೆಸರನ್ನು ಬಳಸುತ್ತಿದೆ. ಆದ್ದರಿಂದ ಕೆ.ಎಸ್.ಆರ್.ಟಿ.ಸಿಯು ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ಇದಾದ ನಂತರ ಕೇಂದ್ರ ಸರ್ಕಾರವು ಬಾಕಿ ಉಳಿದಿದ್ದ ಈ ಪ್ರಕರಣವನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್ಗೆ ವರ್ಗಾಯಿಸಿತ್ತು.
ಈ ಪ್ರಕರಣವು ಇದೀಗ ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದ್ದು, ಕೇರಳ ಆರ್.ಟಿ.ಸಿ ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಕೇರಳ ಆರ್.ಟಿ.ಸಿ ಸಲ್ಲಿಸಿದ್ದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇನ್ಮುಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕೆಎಸ್ಆರ್ ಟಿ ಸಿ ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿರುವುದಿಲ್ಲ.



























