ಜ್ಞಾನವಾಪಿ ಮಸೀದಿಯೊಳಗೆ ಪತ್ತೆ ಆಗಿರುವ ಹಿಂದೂ ದೇವರ ರೂಪದ ವಿಗ್ರಹಗಳಿಗೆ ಪೂಜೆ ಹಾಗೂ ಎಎಸ್ಐ ಸರ್ವೇಯನ್ನು ಪ್ರಶ್ನಿಸಿ ಮುಸ್ಲಿಮರು ಸಲ್ಲಿಸಿದ್ದ ಎಲ್ಲಾ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.
ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ನೇತೃತ್ವದ ಏಕ ಸದಸ್ಯ ಪೀಠವು ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.
ಅಲಹಾಬಾದ್ ಹೈಕೋರ್ಟ್ನಲ್ಲಿ ಸಲ್ಲಿಸಲಾದ ಐದು ಅರ್ಜಿಗಳಲ್ಲಿ ಮೂರು ಅರ್ಜಿಗಳು 1991ರಲ್ಲಿ ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದವು. ಜೊತೆಗೆ ಇತ್ತೀಚೆಗೆ ಎಎಸ್ಐ ಸಮೀಕ್ಷೆಯ ವಿರುದ್ಧ ಇತರೆ ಎರಡು ಅರ್ಜಿಗಳು ಸಲ್ಲಿಕೆ ಆಗಿದ್ದವು. ಈ ಐದೂ ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ವಾರಣಾಸಿ ಕೋರ್ಟ್ನಲ್ಲಿ ಹಿಂದೂ ಕಡೆಯವರು ಸಲ್ಲಿಸಿರುವ ಸಿವಿಲ್ ಮೊಕದ್ದಮೆ ವಿಚಾರಣೆಗೆ ಅರ್ಹವೆಂದು ಹೈಕೋರ್ಟ್ ತಿಳಿಸಿದೆ.
ಮುಸ್ಲಿಂ ಸಮುದಾಯದ ಪರ ಅಂಜುಮಾನ್ ಇಂತೇಜಮಿಯಾ ಮಸಿದಿ ಹಾಗೂ ಮತ್ತು ವಕ್ಫ್ ಮಂಡಳಿ ಅರ್ಜಿ ಸಲ್ಲಿಸಿತ್ತು. ಅರ್ಜಿಯು ಏಪ್ರಿಲ್ 8, 2021 ರಂದು ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದೆ. ಜ್ಞಾನವಾಪಿ ಮಸೀದಿಯ ಸಮಗ್ರ ಸಮೀಕ್ಷೆಯನ್ನು ನಡೆಸುವಂತೆ ವಾರಣಾಸಿ ಜಿಲ್ಲಾ ಕೋರ್ಟ್ ಸೂಚಿತ್ತು. ಇದೆಲ್ಲವನ್ನೂ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗಿದ್ದವು. ಸದ್ಯ ಅರ್ಜಿಗಳನ್ನು ವಜಾ ಮಾಡಿರುವ ಹೈಕೋರ್ಟ್, ಮುಂದಿನ 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ವಾರಣಾಸಿ ಜಿಲ್ಲಾ ಕೋರ್ಟ್ಗೆ ಸೂಚನೆ ನೀಡಿದೆ. ಅಂತೆಯೇ ಜಿಲ್ಲಾ ಕೋರ್ಟ್ನಲ್ಲಿ ವಿಚಾರಣೆ ಮುಂದುವರಿಯಲಿದೆ.
ನಿನ್ನೆ ವಾರಣಾಸಿ ಕೋರ್ಟ್ಗೆ ನ್ಯಾಯಧೀಶ ಡಾ.ಅಜಯ್ ಕೃಷ್ಣ ವಿಶ್ವೇಶ್ ಎಎಸ್ಐ ಸಮೀಕ್ಷೆಯ ವರದಿಯನ್ನು ಸಲ್ಲಿಸಿದ್ದರು. ವರದಿ ಬೆನ್ನಲ್ಲೇ ಡಿಸೆಂಬರ್ 21ರಂದು ತೀರ್ಪು ನೀಡೋದಾಗಿ ಕೋರ್ಟ್ ಸೂಚಿಸಿದೆ.