ಇಂಫಾಲ್ : ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ 87 ಝೋ-ಕುಕಿ ಸಂತ್ರಸ್ತರ ಮೃತದೇಹಗಳನ್ನು ಕೋರ್ಟ್ ನಿರ್ದೇಶನದಂತೆ ಅಂತ್ಯಕ್ರಿಯೆ ಮಾಡಲಾಗಿದೆ.
ರಾಜ್ಯದಲ್ಲಿ ಭಾರೀ ಗಲಾಟೆಯಿಂದ ಮೇ 3 ರಂದು ಜನಾಂಗೀಯ ಹಿಂಸಾಚಾರದಿಂದ 87 ಮಂದಿ ಮೃತಪಟ್ಟಿದ್ದರು. ಈ ಎಲ್ಲ ಮೃತದೇಹಗಳನ್ನು ಇಲ್ಲಿವರೆಗೆ ಶವಾಗಾರಗಳಲ್ಲಿ ಇಡಲಾಗಿತ್ತು. ಸದ್ಯ ಸುಪ್ರೀಂಕೋರ್ಟ್ ಈ ಸಂಬಂಧ ಅಂತಿ ಸಂಸ್ಕಾರಕ್ಕೆ ಹಾಗೂ ಸಮಾಧಿ ಸ್ಥಳವನ್ನ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಇಂಫಾಲ್‌ನ ವಿವಿಧ ಶವಾಗಾರಗಳಿಂದ ನಲವತ್ತೊಂದು ಶವಗಳನ್ನು ವಿಮಾನದ ಮೂಲಕ ತರಲಾಗಿತ್ತು. ಇನ್ನು 46 ಮೃತದೇಹಗಳನ್ನ ಚುರಚಂದಪುರ ಜಿಲ್ಲಾ ಆಸ್ಪತ್ರೆಯಿಂದ ತಂದು ಕೋರ್ಟ್ ನಿರ್ದೇಶನದಂತೆ ಒಟ್ಟಿಗೆ ಸಾಂಗ್ಪಿ ಜಿಲ್ಲೆಯ ಸೆಹ್ಕೆನ್‌ನ ಪ್ರದೇಶದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಯಿತು.
ಮೃತಪಟ್ಟವರಲ್ಲಿ 1 ತಿಂಗಳ ಶಿಶುವಿನಿಂದ ಹಿಡಿದು 100 ವರ್ಷದ ವೃದ್ಧರು ಇದ್ದಾರೆ ಎಂದು ಹೇಳಲಾಗಿದೆ. ನಿಷೇಧಾಜ್ಞೆ ನಡುವೆಯೂ ಸಹಸ್ರಾರು ಜನರು ಆಗಮಿಸಿ ಕಂಬನಿ ಮಿಡಿದು ಮೃತದೇಹಗಳಿಗೆ ಅಂತಿಮ ನಮನ ಸಲ್ಲಿಸಿದರು. ಈ ದೃಶ್ಯ ನೋಡುವವರ ಕಣ್ಣಂಚಲಿ ನೀರು ತರಿಸುವಂತೆ ಇತ್ತು ಎಂದು ಹೇಳಲಾಗಿದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಸಾಕಷ್ಟು ಆಸ್ತಿ-ಪಾಸ್ತಿಗಳು ನಾಶವಾಗಿದ್ದವು. ಎಷ್ಟೋ ಮನೆಗಳಿಗೆ ಬೆಂಕಿ ಕೂಡ ಹಚ್ಚಿ ವಿಕೃತಿ ಮೆರೆಯಲಾಗಿತ್ತು. ಸದ್ಯ ಹಿಂಸಾಚಾರ ಶಾಂತವಾಗಿದ್ದು ಸಾರ್ವಜನಿಕರ ಬದುಕು ಎಂದಿನಂತೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.


























