ಪುತ್ತೂರು : ಹಿಜಾಬ್ ನಿಷೇಧ ಹಿಂಪಡೆದ ಕುರಿತು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ರವರು ಖಂಡನೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜಾರಿಯಲ್ಲಿರುವ ಹಿಜಾಬ್ ನಿಷೇಧವನ್ನು ಹಿಂಪಡೆಯುವ ಹೇಳಿಕೆ ನೀಡಿರುವುದು ಅತ್ಯಂತ ಕಳವಳಕಾರಿಯಾಗಿದೆ. ಎರಡು ವರ್ಷಗಳ ಹಿಂದೆ ಉಡುಪಿಯ ಕಾಲೇಜೊಂದರಲ್ಲಿ ಆರಂಭವಾದ ಹಿಜಾಬ್ ವಿವಾದ ಕುರಿತು ತೀರ್ಪು ನೀಡಿರುವ ಉಚ್ಛ ನ್ಯಾಯಾಲಯ, ಹಿಜಾಬ್ ಧಾರಣೆಯ ಕುರಿತ ನಿರ್ಧಾರ ತೆಗೆದುಕೊಳ್ಳಲು ಆಯಾ ಶಾಲೆಗಳ ಆಡಳಿತ ಮಂಡಳಿಗಳಿಗೆ ಅನುಮತಿ ನೀಡಿತ್ತು. ತೀರ್ಪಿನ ಅನುಗುಣವಾಗಿ ಹಿಂದಿನ ಸರಕಾರ ಹಿಜಾಬ್ ನಿಷೇಧ ಜಾರಿಗೆ ತಂದಿತ್ತು.
ಆದರೆ ಈಗ ಅನ್ಯಕೋಮಿನವರ ಓಲೈಕೆಗಾಗಿ ಕಾಂಗ್ರೆಸ್ ಸರಕಾರ ಈ ರೀತಿಯ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ವಿವಾದ ಆರಂಭವಾದಾಗ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಹಾಗೂ ವಿದ್ಯಾ ದೇಗುಲದಲ್ಲಿ ಜಾತಿ, ಮತ, ಧರ್ಮಗಳ ಭೇದ ಇರಬಾರದೆಂಬ ದೃಷ್ಠಿಯಿಂದ ಬಜರಂಗದಳ ನೇರ ಹೋರಾಟಕ್ಕೆ ಇಳಿದಿರಲಿಲ್ಲ, ಆದರೆ ಈಗ ಕಾಂಗ್ರೆಸ್ ಸರಕಾರದ ಅನ್ಯಕೋಮಿನರ ತುಷ್ಠೀಕರಣ ಮಿತಿ ಮೀರುತ್ತಿದ್ದು, ಒಂದು ವೇಳೆ ಹಿಜಾಬ್ ನಿಷೇಧವನ್ನು ಹಿಂಪಡೆದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಕೇಸರಿ ಚಳುವಳಿಯನ್ನು ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ.

























