ಮನಾಲಿ : ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದಕ್ಕೆ ನದಿಯಲ್ಲಿ ಮಹೀಂದ್ರಾ ಥಾರ್ ಕಾರು ಓಡಿಸಿದ ಭೂಪನಿಗೆ ಹಿಮಾಚಲ ಪ್ರದೇಶದಲ್ಲಿ ಸಂಕಷ್ಟ ಎದುರಾಗಿದೆ. ಕಳೆದ ಎರಡು ದಿನಗಳ ಹಿಂದೆ ಮನಾಲಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಈ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಕಾರು ಚಾಲಕ ಚಂದ್ರ ನದಿಯ ಲಾಹೌಲ್ ಕಣಿವೆಯಲ್ಲಿ ಮಹೀಂದ್ರಾ ಥಾರ್ ಕಾರು ಓಡಿಸಿದ್ದ. ನದಿಯಲ್ಲಿ ಮಹೀಂದ್ರಾ ಥಾರ್ ಕಾರು ಚಲಾಯಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ನದಿಯಲ್ಲಿ ಮಹೀಂದ್ರಾ ಥಾರ್ ಕಾರು ಓಡಿಸಿದ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಿಮಾಚಲ ಪ್ರದೇಶ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕಾರು ಮಾಲೀಕನನ್ನು ಪತ್ತೆ ಹಚ್ಚಿದ್ದು ನೊಟೀಸ್ ನೀಡಿದ್ದಾರೆ. ಕಾನೂನು ಉಲ್ಲಂಘನೆ ಆರೋಪದ ಮೇಲೆ ದುಬಾರಿ ಪ್ರಮಾಣದ ದಂಡವನ್ನು ವಿಧಿಸಲು ಮುಂದಾಗಿದ್ದಾರೆ. ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮಹೀಂದ್ರಾ ಥಾರ್ ಕಾರು ನದಿಗೆ ಇಳಿದಿದ್ದೇಕೆ..!?
ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ಮನಾಲಿಯ ರಸ್ತೆಗಳಲ್ಲಿ ಕಿ.ಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಸುಮಾರು 55 ಸಾವಿರ ವಾಹನಗಳು ನಿಂತಲ್ಲೇ ನಿಂತಿದ್ದವು.
ಸಾವಿರಾರು ವಾಹನಗಳ ಟ್ರಾಫಿಕ್ ಜಾಮ್ ನೋಡಿದ ಮಹೀಂದ್ರಾ ಥಾರ್ ಕಾರಿನ ಚಾಲಕ ರಸ್ತೆಯನ್ನ ಬಿಟ್ಟು ಲಾಹೌಲ್ ಕಣಿವೆಗೆ ಇಳಿದಿದ್ದಾನೆ. ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ನದಿಯಲ್ಲಿ ಮಹೀಂದ್ರಾ ಥಾರ್ ಕಾರನ್ನ ಚಲಾಯಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಮಹೀಂದ್ರಾ ಥಾರ್ ಕಾರಿನ ಈ ವಿಡಿಯೋ ವೈರಲ್ ಆಗಿತ್ತು.
ಈ ವೀಡಿಯೋ ನೋಡಿರೋ ಪೊಲೀಸರು ಅಪಾಯದ ಮಾರ್ಗದಲ್ಲಿ ಕಾರು ಚಲಾಯಿಸಿದ್ದಕ್ಕೆ ದಂಡ ವಿಧಿಸಲು ಮುಂದಾಗಿದ್ದಾರೆ. ಈ ದುಸ್ಸಾಹಸ ಮತ್ತೊಬ್ಬರಿಗೂ ಪ್ರೇರಣೆಯಾಗುವ ಸಾಧ್ಯತೆ ಇದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.


























