ಮಂಗಳೂರು : ಇದು ತುಳುನಾಡಿನ ದೈವಾರಾಧನೆಯ ಮತ್ತೊಂದು ರೋಚಕ ಸ್ಟೋರಿ. ಎರಡೇ ತಿಂಗಳಲ್ಲಿ ದೈವದ ಮತ್ತೊಂದು ಪವಾಡ ನಡೆದಿದೆ.
ಒರಿಸ್ಸಾ ಮೂಲದ ಅನ್ಯಕೋಮಿನ ಯುವಕನ ಮೈ ಮೇಲೆ ಪಿಲಿಚಾಮುಂಡಿ ದೈವದ ಆವೇಶ ಬಂದ ಘಟನೆ ಮಂಗಳೂರಿನ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ ನಡೆದಿತ್ತು. ಅದರಂತೆ ನೇಮೋತ್ಸವಕ್ಕೆ ತಯಾರಿ ನಡೆಸುತ್ತಿದ್ದಾಗ ದೈವಸ್ಥಾನದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ.

ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಮೇಲೆ ಪಿಲಿಚಾಮುಂಡಿ ಆವೇಶ ಬಂದು ಮುನಿಸು ತೋರಿತ್ತು. ದೈವದ ಮುನಿಸಿನ ಬೆನ್ನಲ್ಲೇ ಪ್ರಶ್ನೆ ಇಟ್ಟಾಗ ಪಾಳುಬಿದ್ದ ದೈವಸ್ಥಾನ ಹಾಗೂ ನೇಮೋತ್ಸವ ಸ್ಥಗಿತಗೊಳಿಸಿದ್ದು ಕಾಣಿಸಿದೆ.
ಹೀಗಾಗಿ ಪೆರ್ಮುದೆಯ ಕಾಯಾರ್ ಕಟ್ಟೆಯಲ್ಲಿ 18 ವರ್ಷಗಳ ಬಳಿಕ ದೈವದ ನೇಮೋತ್ಸವಕ್ಕೆ ತಯಾರಿ ನಡೆಸಲಾಗುತ್ತಿದೆ. ಪಾಳು ಬಿದ್ದಿದ್ದ ಪಿಲಿಚಾಮುಂಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಜ.4 ರಂದು ನೇಮೋತ್ಸವ ನಡೆಯಲಿದ್ದು, ಎರಡೇ ತಿಂಗಳಲ್ಲಿ ದೈವಸ್ಥಾನಕ್ಕೆ ದ್ವಾರ, ಮೆಟ್ಟಿಲು ನಿರ್ಮಾಣ ಮಾಡಲಾಗಿದೆ.
ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡ
ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡವೂ ನಡೆದಿದೆ. ಕಾಮಗಾರಿ ಹೊತ್ತಲ್ಲಿ ಪವಾಡ ಕಂಡು ದೈವಾರಾಧಕರಲ್ಲಿ ಅಚ್ಚರಿ ವ್ಯಕ್ತವಾಗಿದೆ. 18 ವರ್ಷಗಳಿಂದ ದೈವಾರಾಧನೆ ಸ್ಥಗಿತಗೊಂಡ ಜಾಗದಲ್ಲಿ ಇರುವಿಕೆ ತೋರಿಸಿತಾ ಪಿಲಿಚಾಮುಂಡಿ ದೈವ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ಹುಲಿಯ ಹೆಜ್ಜೆ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಪತ್ತೆಯಾಗಿದೆ. ಸ್ಥಳೀಯ ಯುವಕರು ಕೆಲಸ ಮಾಡುತ್ತಿದ್ದಾಗ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ.
ಸಾರ್ವಜನಿಕವಾಗಿ ಕಾಣ ಸಿಗದೇ ಇದ್ದರೂ ದೈವಸ್ಥಾನದ ಜಾಗದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ಹೊತ್ತಲ್ಲಿ ಕೆಲಸ ಮಾಡುತಿದ್ದ ಸ್ಥಳೀಯ ಯುವಕರಿಗೆ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದೆ. ದೈವಸ್ಥಾನದ ಜಾಗದಲ್ಲಿ ಸಾರ್ವಜನಿಕವಾಗಿ ಹುಲಿ ಯಾರಿಗೂ ಕಾಣಿಸದೇ ಇದ್ದರೂ ಎಂಆರ್ ಪಿಎಲ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಹುಲಿ ಓಡಾಟದ ದೃಶ್ಯ ಕಂಡುಬಂದಿದೆ. ಹೀಗಾಗಿ ಈ ಹೆಜ್ಜೆ ಗುರುತುಗಳು ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ವ್ಯಾಘ್ರನದ್ದು, ಇದು ಹುಲಿ ರೂಪದಲ್ಲಿ ಕಾಣಿಸಿಕೊಂಡು ಜನರಿಗೆ ಅಭಯ ನೀಡಿದೆ ಎಂಬ ನಂಬಿಕೆ ಭಕ್ತರದ್ದು.
ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಕರೆಯುತ್ತಾರೆ. ಕನ್ನಡದಲ್ಲಿ ಇದನ್ನು ವ್ಯಾಘ್ರ ಚಾಮುಂಡಿ ಅಂತಲೂ ಕರೆಯುತ್ತಾರೆ.
ತುಳುನಾಡಿನ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕವೂ ಹೌದು. ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಅನ್ನೋ ನಂಬಿಕೆ ಇದೆ.
ದೈವಸ್ಥಾನದ ಪಕ್ಕದಲ್ಲಿ ಎಂಆರ್ಪಿಎಲ್ ಕಂಪನಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಕಂಪನಿ ಸಮೀಪ ನೇಮೋತ್ಸವಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇದೀಗ ಮಾತುಕತೆ ನಂತರ ಕಂಪನಿಯು ನೇಮೋತ್ಸವ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಗ್ರಾಮಸ್ಥರು ಮತ್ತು ಎಂಆರ್ಪಿಎಲ್ ಸಹಕಾರದಲ್ಲಿ ಜ.4 ರಂದು ನೇಮೋತ್ಸವ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ನೇಮೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.



























