ಉಡುಪಿ : ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕುರಿತು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಪ್ರತಿಮೆ ಪ್ರತಿಷ್ಠೆಗೆ ಮುಂಚೆ ಸುವರ್ಣನ್ಯಾಸ ಆಗಬೇಕು. ಗರ್ಭಗುಡಿಯಲ್ಲಿ ಪ್ರತಿಮೆ ಇರಿಸುವಲ್ಲಿ ಸುವರ್ಣ ನ್ಯಾಸ ಮಾಡಿ ಬಂದಿದ್ದೇವೆ. ಜನವರಿ 17 ಕ್ಕೆ ಪ್ರತಿಮೆ ಕೆತ್ತಿದ ಸ್ಥಳದಿಂದ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಪ್ರತಿಮೆಯನ್ನು ಸರೆಯೂ ನದಿಗೆ ತೆಗೆದುಕೊಂಡು ಹೋಗಲಾಗುತ್ತೆ. ಸರಯೂ ಜಲದ ಅಭಿಷೇಕ ಮಾಡಲಾಗುತ್ತೆ. ಬಳಿಕ ಮಂದಿರದ ಕಡೆಗೆ ಪ್ರತಿಮೆ ತರಲಾಗುತ್ತೆ. ಜನವರಿ 18, 19, 20ರಂದು ಮಹತ್ವದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತದೆ. ಜಲಾಧಿ ವಾಸ ಶಯ್ಯಾಧಿವಾಸ, ಧಾನ್ಯಾಧಿವಾಸ ಈ ಪ್ರಕ್ರಿಯೆಗಳು ನಡೆಯುತ್ತವೆ ಎಂದು ಹೇಳಿದ್ದಾರೆ.
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಸದಸ್ಯರಾಗಿದ್ದು, ಪ್ರಾಣಪ್ರತಿಷ್ಟೆ ವಿಧಿವಿಧಾನಗಳ ಕುರಿತು ಶ್ರೀಗಳು ಮಾತನಾಡಿದ್ದಾರೆ. ಜನವರಿ 21 ಪೂರ್ವ ಸಿದ್ಧತೆ ಆರಂಭವಾಗುತ್ತದೆ. ಜ.22 ರಂದು ಅಭಿಜಿನ್ ಮಹೂರ್ತದ ಪ್ರಾಣ ಪ್ರತಿಷ್ಠೆ ನಡೆಯುತ್ತದೆ. 23 ರಿಂದ 48 ದಿನಗಳ ಕಾಲ ಒಂದು ಮಂಡಲ ಪರ್ಯಂತ, ನಿತ್ಯ ಪ್ರತಿಮೆಯಲ್ಲಿ ಸನ್ನಿಧಾನ ತುಂಬುವ ಕೆಲಸ ಮಾಡುತ್ತೇವೆ. ಸನ್ನಿಧಾನ ತುಂಬಬೇಕು ಅದಕ್ಕೆ ವೇದೋಕ್ತ ಮಹಾಮಂತ್ರದ ಮೂಲಕ ಆರಾಧನೆ ಮಾಡಲಾಗುತ್ತದೆ. ಪ್ರತಿನಿತ್ಯ ಎರಡು ಮಂತ್ರಗಳನ್ನು ಇಟ್ಟುಕೊಂಡು ಆರಾಧನೆ ಮಾಡಲಾಗುತ್ತದೆ. ಜಪ, ಹೋಮ ತರ್ಪಣ ಪ್ರತಿಮೆಗೆ ಕಲಶಾಭಿಷೇಕ ನಡೆಯುತ್ತದೆ. ಬೆಳಗ್ಗೆ ಯಜ್ಞ ಯಾಗ ಕಲಶಾಭಿಷೇಕ ನಡೆಯುತ್ತದೆ. ಮುಸ್ಸಂಜೆ ಬಳಿಕ ವೇದ ಪಾರಾಯಣ, ಅಷ್ಟಾಧಶ ಪುರಾಣ ಪಾರಾಯಣ, ರಾಮಾಯಣ ಮಹಾಭಾರತ ಪಾರಾಯಣ ನಡೆಯುತ್ತೆ. ಮುಸ್ಸಂಜೆ ನಿತ್ಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ನೃತ್ಯ, ವಾದ್ಯ ಸಹಿತ ಶೋಡಸೋಪಚಾರ ಪೂಜೆ ಜರುಗಲಿದೆ ಎಂದಿದ್ದಾರೆ.
ಬಳಿಕ ಮಾತನಾಡಿದ ಅವರು ಮೊದಲನೇ 44 ದಿನಗಳ ಕಾಲ ಪ್ರತಿದಿನ ಎರಡು ಮಂತ್ರ ಇಟ್ಟುಕೊಂಡು ಆರಾಧನೆ ನಡೆಯುತ್ತದೆ. ಕೊನೆಯ ನಾಲ್ಕೈದು ದಿನ ಸಹಸ್ರ ಕಲಶಾಭಿಷೇಕ ನಡೆಯುತ್ತದೆ. ನಮ್ಮಲ್ಲಿ ನಡೆಯುವ ಬ್ರಹ್ಮ ಕುಂಭಾಭಿಷೇಕ ಬ್ರಹ್ಮಕಲಶಾಭಿಷೇಕವನ್ನು ಉತ್ತರ ಭಾರತದಲ್ಲಿ ಕುಂಭಾಭಿಷೇಕ ಎನ್ನುತ್ತಾರೆ ಎಂದು ಹೇಳಿದ್ದಾರೆ.
ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವವರ ಕುರಿತಾಗಿಯೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿದ್ದಾರೆ. ಪ್ರಾಣ ಪ್ರತಿಷ್ಠೆಯಿಂದ 48 ದಿನಗಳ ಒಟ್ಟು ಆಚರಣೆ ಶಾಸ್ತ್ರೋಕ್ತವಾಗಿ ನಡೆಯುತ್ತೆ. 48 ದಿನ ವೇದೋಕ್ತಕರ್ಮದಿಂದ ನಡೆಯುತ್ತೆ. 48 ದಿನಗಳ ಮಂಡಲ ಪೂಜೆಯ ಜವಾಬ್ದಾರಿಯನ್ನು ನಾನು ವಹಿಸಿಕೊಂಡಿದ್ದೇನೆ. ವಿಶ್ವೇಶ ತೀರ್ಥರು ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಸ್ಥಾಪಿಸಿದ್ದಾರೆ. 65 ವರ್ಷಗಳಿಂದ ಅಲ್ಲಿ ಅನೇಕ ವಿದ್ವಾಂಸರು ತಯಾರಾಗಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ಯಾರ್ಥಿ, ವಿದ್ವಾಂಸರು ಸೃಷ್ಟಿಯಾಗಿದ್ದಾರೆ. ರಾಜ್ಯದ ನಾನಾ ಮೂಲೆಯಲ್ಲಿರುವ, ದೇಶದ ಅನೇಕ ಕಡೆಗಳಲ್ಲಿರುವ ಇಂತಹ ವಿದ್ವಾಂಸರು ಧಾರ್ಮಿಕ ಕಾರ್ಯ ನಡೆಸುತ್ತಾರೆ. ಮಂಡಲೋತ್ಸವದಲ್ಲಿ ಭಾಗಿಯಾಗ್ತಾರೆ. ಹೆಚ್ಚು ವಿದ್ವಾಂಸರು ವೈದಿಕರು ಭಾಗವಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಇದೆ. ದಿನಾ ಪ್ರತ್ಯೇಕ ಪ್ರತ್ಯೇಕ ಒಟ್ಟು 400 ವೈದಿಕರು ಯಜ್ಞ ಯಾಗದಲ್ಲಿ ಭಾಗಿಯಾಗ್ತಾರೆ. ಇಂದೂ ಅನುಷ್ಠಾನದಲ್ಲಿ ಭಾಗಿಯಾದವರು ನಾಳೆ ಇರುವುದಿಲ್ಲ. ಪ್ರತಿ ದಿನ ಪ್ರತ್ಯೇಕ ವಿದ್ವಾಂಸರಿಂದ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಾರೆ. ಪ್ರತಿದಿನ 10 -15 ವಿದ್ವಾಂಸರು ಬೇಕಾಗುತ್ತದೆ. ಕೊನೆಯ ನಾಲ್ಕು ದಿನಗಳ ಕಾಲ ನೂರು ಮಂದಿ ವಿದ್ವಾಂಸರು ಬೇಕಾಗುತ್ತದೆ. ಅಷ್ಟು ದಿನಗಳ ಕಾಲ ನಾನು ಅಯೋಧ್ಯೆಯಲ್ಲಿ ಇರುತ್ತೇನೆ ಎಂದಿದ್ದಾರೆ.
ಮಂಡಲ ಉತ್ಸವ ಸಂದರ್ಭದಲ್ಲಿ ಸಹಸ್ರ ಕಲಶಾಭಿಷೇಕ ನಡೆಯುತ್ತೆ. ಇದರಲ್ಲಿ ಸಾರ್ವಜನಿಕರಿಗೆ ಪಾಲ್ಗೊಳ್ಳಲು ಅವಕಾಶ ಇದೆ. ಎಲ್ಲಾ ದೇವಸ್ಥಾನಗಳಲ್ಲಿ ದೇವರಿಗೆ ಸಲ್ಲಿಸಬಹುದಾದ ಹರಕೆಯ ಪಟ್ಟಿ ಇರುತ್ತದೆ. ಭಕ್ತರಿಗೂ ಯಾವುದಾದರು ಸೇವೆ ಮಾಡೋಣ ಎಂಬ ಭಾವನೆ ಇರುತ್ತದೆ. ಭಕ್ತರ ಹರಕೆ ಶಕ್ತಿಗೆ ಅನುಸಾರವಾಗಿ ಹಲವಾರು ಸೇವೆಗಳನ್ನು ಸಲ್ಲಿಸುತ್ತಾರೆ. ಅಂತಹ ಯಾವುದೇ ಪೂಜಾ ಸೇವೆಗಳು ಅಯೋಧ್ಯ ಶ್ರೀರಾಮ ಮಂದಿರದಲ್ಲಿ ಇರುವುದಿಲ್ಲ. ಸೇವೆ ಮಾಡಲೇಬೇಕು ಎಂದು ಮನಸ್ಸಿನಲ್ಲಿ ಇಚ್ಚಿಸಿದವರಿಗೆ ಒಂದು ಅವಕಾಶ ಇದೆ. ಜನವರಿ 22ರ ನಂತರ ದೇವರಿಗೆ ಸಹಸ್ರ ಕಲಶಾಭಿಷೇಕ ನಡೆಯಲಿದೆ. ಕಳಶಾಭಿಷೇಕದಲ್ಲಿ ಸೇವೆಯನ್ನು ಮಾಡುವ ಅವಕಾಶ ಭಕ್ತರಿಗೆ ಇದೆ. ರಜತ ಕಲಶಾಭಿಷೇಕ ಮೂಲಕ ದೇವರ ಸೇವೆ ಮಾಡಬಹುದು. ಅದಕ್ಕೊಂದು ಮಾನದಂಡ ನಿರ್ಧರಿಸಿದ್ದೇವೆ. ಕಲಶಾಭಿಷೇಕ ಸೇವಾಕರ್ತರು ಸಮಾಜ ಸೇವೆ ಮಾಡಿರಬೇಕು. ರಜತಾ ಕೆಲಸಕ್ಕೆ ಒಂದು ಲಕ್ಷ ರೂಪಾಯಿ ಎಂದು ಇಟ್ಟುಕೊಳ್ಳೋಣ. ಹತ್ತು ಪಟ್ಟು ಅಂದರೆ 10 ಲಕ್ಷ ರೂಪಾಯಿಯಷ್ಟು ಸಮಾಜ ಸೇವೆ ಮಾಡಿದವನಿಗೆ ರಜತ ಕಲಶ ಅಭಿಷೇಕ ಸೇವೆ ಸಲ್ಲಿಸುವ ಅವಕಾಶವಿದೆ. 10 ಲಕ್ಷ ರೂಪಾಯಿ ಸಮಾಜ ಸೇವೆ ಮಾಡಿದವರು ರಜತ ಕಲಶವನ್ನು ತೆಗೆದುಕೊಂಡು ಬರಬೇಕು. ಆ ಕಲಶದ ಮೂಲಕ ದೇವರಿಗೆ ಅಭಿಷೇಕ ಮಾಡಿ ಕಲಶವನ್ನು ಸೇವಾಕರ್ತನಿಗೆ ಹಿಂತಿರುಗಿಸುತ್ತೇವೆ. ಶ್ರೀರಾಮ ದೇವರು ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದಿದ್ದಾರೆ. ದೇಶಭಕ್ತಿ ಏನು ಎಂಬುದನ್ನು ರಾಮದೇವರು ತೋರಿಸಿಕೊಟ್ಟಿದ್ದಾರೆ. ದೇಶಭಕ್ತಿ ಬೇರೆಯಲ್ಲ ರಾಮ ಭಕ್ತಿ ಬೇರೆಯಲ್ಲ, ರಾಮ ಭಕ್ತಿ ಬೇರೆಯಲ್ಲ ದೇಶಭಕ್ತಿ ಬೇರೆಯಲ್ಲ. ರಾಮಸೇವೆ ಮಾಡಲು ಬಯಕೆ ಇರುವವರು ದೇಶ ಸೇವೆ ಮಾಡಬೇಕು ಎಂದು ಹೇಳಿದ್ದಾರೆ.
ಮಾಡಬೇಕಾದ ದೇಶ ಸೇವೆಗಳು ಏನು..?
ಶ್ರೀರಾಮ ದೇವರಿಗೆ ಅಯೋಧ್ಯೆಯಲ್ಲಿ ಮನೆ ನಿರ್ಮಾಣ ಆಗಿದೆ. ರಾಮ ರಾಜ್ಯದಲ್ಲಿ ಮನೆ ಇಲ್ಲದ ನಿರ್ವಸಿತರು ಇರಬಾರದು. ರಾಮಮಂದಿರ ಆಯ್ತು, ರಾಮ ರಾಜ್ಯದ ಕನಸನ್ನು ಕಾಣೋಣ. ರಾಮ ರಾಜ್ಯದಲ್ಲಿ ಮನೆ ಇಲ್ಲ ಎಂಬ ಚಿಂತೆ ಯಾರಲ್ಲೂ ಇರಬಾರದು. ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಪುಟ್ಟ ಮನೆಯನ್ನು ಕಟ್ಟಿಸಿ ಕೊಡಬಹುದು. ನಮ್ಮ ಮನೆಯ ಸುತ್ತಮುತ್ತ ದುರ್ಬಲ ಅಶಕ್ತರಿಗೆ ಒಂದು ಮನೆ ಕಟ್ಟಿಸಿ ಕೊಡೋಣ. ಅಶಕ್ತರಿಗೆ ಮನೆ ಕಟ್ಟಿಸಿ ಕೊಡಿ. ಶ್ರೀರಾಮನಿಗೆ ರಜತ ಕಲಶ ಅರ್ಪಿಸಬಹುದು. ಎಂಎಲ್ಎ, ಎಂಪಿ, ಎಂಎಲ್ ಸಿ ತಹಶೀಲ್ದಾರ್ ಅವರಿಂದ ಪ್ರಮಾಣ ಪತ್ರ ತನ್ನಿ. ಸಮಾಜ ಸೇವೆ ಮಾಡಿದ ಬಗ್ಗೆ ಗೆಜೆಟೆಡ್ ಆಫೀಸರ್ ನಿಂದ ಒಂದು ಪತ್ರ. ಇದರಿಂದ ರಾಮ ರಾಜ್ಯದ ಕನಸು ನನಸಾಗುತ್ತದೆ. ಪ್ರಸಾದ ರೂಪದಲ್ಲಿ ಸಿಕ್ಕ ಕಲಶ ಮನೆಯಲ್ಲಿ ಶಾಶ್ವತ ರೂಪದಲ್ಲಿ ಇರುತ್ತದೆ. ಮನೆಯ ಕಟ್ಟಿಸಬೇಕೆಂದು ಇಲ್ಲ. ಶಿಕ್ಷಣ ಆರೋಗ್ಯ ನಿವೇಶನ ಮಾಡಿಕೊಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಹಾಯ ಮಾಡಬಹುದು. ಗೋವುಗಳನ್ನು ದತ್ತು ಸ್ವೀಕರಿಸಬಹುದು. ಕುಟುಂಬದವರಿಗೆ ಅಲ್ಲ ಕುಟುಂಬದಿಂದ ಹೊರಗಿನವರಿಗೆ ವ್ಯವಸ್ಥೆ ಮಾಡಿಕೊಡಬೇಕು.


























