ಪುತ್ತೂರು : ಮನೆ ನಿರ್ಮಾಣ ಕೆಲಸಕ್ಕೆಂದು ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡಲಾಗದೆ ಬೇಸರದಲ್ಲಿದ್ದ ಮಹಿಳೆಯೋರ್ವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಲ್ನಾಡ್ ನಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಬಲ್ನಾಡು ಗ್ರಾಮದ ಕೊಪ್ಪಳಪದವು ಯೋಗೀಶ್ ಎಂಬವರ ಪತ್ನಿ ಕೇಸರಿ (41) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ತೋಟಕ್ಕೆ ಹಾಕಲು ತಂದಿರಿಸಿದ್ದ ಕಳೆನಾಶಕ ಸೇವಿಸಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕೊಪ್ಪಳಪದವು ಬಾಬು ನಾಯ್ಕರ ಮಗ ಯೋಗೀಶ್ ಅವರ ಪತ್ನಿ ಕೇಸರಿಯವರು ತಮ್ಮ ಮನೆಯ ಕೆಲಸಕ್ಕಾಗಿ ಪರಿಚಯದವರಿಂದ ಮತ್ತು ಸಂಬಂಧಿಕರಿಂದ ಹಾಗೂ ಸ್ವಸಹಾಯ ಸಂಘದಿಂದ ಕೈ ಸಾಲ ಮಾಡಿದ್ದರು. ಸಾಲ ನೀಡಿದವರಿಗೆ ಮರುಪಾವತಿ ಮಾಡಲಾಗದ ಕಾರಣ ಬೇಸರದಲ್ಲಿದ್ದು, ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಪತ್ನಿಗೆ ಪತಿ ಸಮಾಧಾನ ಹೇಳುತ್ತಿದ್ದರು.
ಜ.5 ರಂದು ಬೆಳಗ್ಗೆ ಪತಿ ಕೆಲಸಕ್ಕೆ ಹೋಗಿದ್ದ ವೇಳೆ ಮಧ್ಯಾಹ್ನ ಪತಿಯ ಸಹೋದರ ಫೋನ್ ಕರೆ ಮಾಡಿ, ಕೇಸರಿ ಮನೆ ಬಳಿ ಯಾವುದೋ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿರುವುದಾಗಿ ತಿಳಿಸಿದ್ದರು. ಕೂಡಲೇ ಪತಿ ಮನೆಗೆ ಬಂದು ಪತ್ನಿ ಕೇಸರಿಯನ್ನು ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿದ್ದ ಕೇಸರಿ ಜ.6 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಮೃತರ ಪತಿ ಯೋಗೀಶ್ ಅವರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕುವೆತ್ತಿಲ ಮೂಲದವರಾಗಿರುವ ಮೃತ ಕೇಸರಿಯವರು ಆರಂಭದಲ್ಲಿ ಹಲವು ವರ್ಷಗಳ ಕಾಲ ಹಾರಾಡಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು.
ಮೃತರು ಪತಿ, ಇಬ್ಬರು ಪುತ್ರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.


























