ಉತ್ತರಪ್ರದೇಶ : ಜನವರಿ 22 ರಾಮಮಂದಿರದ ಉದ್ಘಾಟನೆ. ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಇಡೀ ದೇಶವೇ ಕಾಯುತ್ತಿದೆ. ಪ್ರತೀ ಮನೆಮನೆಯಲ್ಲೂ ಈ ಸಂಭ್ರಮ ಮನೆ ಮಾಡಿದೆ. ಮಹಿಳೆಯರು ಒಂದು ವಿಶೇಷ ಬೇಡಿಕೆ ಇಟ್ಟಿದ್ದಾರೆ. ಏನು ಆ ಬೇಡಿಕೆ ಅಂತಾ ನೀವು ಕೇಳಿದ್ರೆ ಖಂಡಿತಾ ಆಶ್ಚರ್ಯ ಪಡ್ತೀರಿ.
ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ. ಆ ದಿನಾಂಕ ಜನವರಿ 22. ದೇಶದ ಇತಿಹಾಸ ಪುಟಗಳಲ್ಲಿ ಅಚ್ಚಾಗುವ ದಿನ. ಅಂದೇ ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆ. ಅದರಲ್ಲೂ ಬಾಲ ರಾಮನ ರೂಪವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ದಿನದ ಸಂಭ್ರಮ ದೇಶಾದ್ಯಂತ ಹಿಂದೂಗಳಲ್ಲಿ ಈಗಾಗಲೇ ಮನೆ ಮಾಡಿದೆ. ಮನೆಮನೆಗೆ ಅಯೋಧ್ಯೆಯಿಂದ ಅಕ್ಷತೆ ಬಂದು ತಲುಪುತ್ತಿದೆ. ಕೆಲವರು ಅಯೋಧ್ಯೆಗೆ ಹೋಗುವ ಸಿದ್ಧತೆಯಲ್ಲಿದ್ದಾರೆ. ಹೋಗಲಾಗದವರು, ರಾಮ ಭಜನೆಯಲ್ಲಿ ತೊಡಗಿ, ಆ ದಿನವನ್ನ ವಿಶೇಷವಾಗಿಸಲು ತಯಾರಿ ಮಾಡಿಕೊಳ್ತಿದ್ದಾರೆ. ಈ ನಡುವೆ ಗರ್ಭಿಣಿ ಮಹಿಳೆಯರು ಈ ದಿನವನ್ನು ತಮ್ಮದೇ ಆದ ರೀತಿಯಲ್ಲಿ ವಿಶೇಷವಾಗಿಸಿಕೊಳ್ಳಲು ಪ್ಲಾನ್ ಮಾಡಿದ್ದು, ಹೊಸ ಬೇಡಿಕೆ ಇಡುತ್ತಿದ್ದಾರೆ.
ವೈದ್ಯರ ಬಳಿ ಅನೇಕ ಗರ್ಭಿಣಿಯರಿಂದ ಮನವಿ
ನೀವು ಏನ್ ಮಾಡ್ತಿರೋ ಗೊತ್ತಿಲ್ಲ ಡಾಕ್ಟ್ರೆ, ನಮ್ಗೆ ಮಾತ್ರ ಜನವರಿ 22ರ ಪುಣ್ಯ ದಿನವೇ ಹೆರಿಗೆ ಆಗಬೇಕು. ಇಂಥದ್ದೊಂದು ಬೇಡಿಕೆಯನ್ನ ಅನೇಕ ಗರ್ಭಿಣಿಯರು ಮಾಡ್ತಿದ್ದಾರಂತೆ. ಹೀಗಾಗ್ತಿದೆ ಅನ್ನೋ ಮಾಹಿತಿಯನ್ನ ಉತ್ತರಪ್ರದೇಶದ ಕಾನ್ಪುರದಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರೇ ಬಿಚ್ಚಿಟ್ಟಿದ್ದಾರೆ.
ತಾಯಂದಿರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ
ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅಂದ್ರೆ ಜನವರಿ 22 ರಂದು ಸಿಸೇರಿಯನ್ ಹೆರಿಗೆ ಮಾಡುವಂತೆ ಹಲವಾರು ಗರ್ಭಿಣಿಯರು ಕಾನ್ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಮನವಿ ಮಾಡಿದ್ದಾರೆ. ಸಿಸೇರಿಯನ್ ಮಾಡಿದ್ರೂ ಪರವಾಗಿಲ್ಲ ಅಂದೇ ನಮಗೆ ಹೆರಿಗೆ ಮಾಡಿಸಿ ಅಂತಾ ಕೇಳಿಕೊಳ್ತಿದ್ದಾರಂತೆ. ಜನವರಿ 22ರ ಆಸುಪಾಸಿನಲ್ಲಿ ಹೆರಿಗೆಯ ಸಮಯ ಹೊಂದಿರುವ ಹೆಚ್ಚಿನ ಸಂಖ್ಯೆಯ ಮಹಿಳೆಯರು ಈ ರೀತಿ ಮನವಿ ಮಾಡ್ತಿದ್ದಾರೆ. ಸದ್ಯ ಕಾನ್ಪುರದ ಜಿಎಸ್ವಿಎಂ ವೈದ್ಯಕೀಯ ಕಾಲೇಜಲ್ಲಿ ಇಂಥಾ ಬೇಡಿಕೆ ಕಂಡು ಬಂದಿದೆ. ಈ ಕೋರಿಕೆ ಮೇರೆಗೆ ಜನವರಿ 22 ರಂದು ಸುಮಾರು 35 ಸಿಸೇರಿಯನ್ ಆಪರೇಷನ್ಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಅಂತಾ ವೈದ್ಯರು ತಿಳಿಸಿದ್ದಾರೆ.
ಕೆಲ ಗರ್ಭಿಣಿಯರ ಹೆರಿಗೆ ದಿನಾಂಕವು ಜನವರಿ 22 ರ ಮುಂಚೆ ಅಥವಾ ನಂತರದ ದಿನದಲ್ಲಿತ್ತು. ಆದರೆ ಬಹುಪಾಲು ಗರ್ಭಿಣಿಯರು ತಮಗೆ ಜನವರಿ 22 ರಂದೇ ಹೆರಿಗೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ತಾಯಂದಿರ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಕೆಲವರ ಮನವಿಗೆ ಮಾತ್ರವೇ ಒಪ್ಪಿಗೆ ಸೂಚಿಸಲಾಗಿದೆ ಅಂತಾ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಅಷ್ಟಕ್ಕೂ ಜನವರಿ 22ಕ್ಕೆ ಯಾಕೆ ಹೆರಿಗೆ ಮಾಡಿಸಬೇಕು..!? ಅನ್ನೋ ಪ್ರಶ್ನೆ ಮೂಡದೇ ಇರಲ್ಲ. ಇದಕ್ಕೆ ಉತ್ತರ ಅವರವರ ನಂಬಿಕೆ. ಅಲ್ಲದೇ ಆ ದಿನ ಅತ್ಯಂತ ಶುಭದಿನ ಅನ್ನೋ ಯೋಚನೆ..
ಪ್ರಾಣ ಪ್ರತಿಷ್ಠೆಯ ದಿನದಂದು ನಾವು ಮಗುವಿಗೆ ಜನ್ಮ ನೀಡಿದ್ರೆ, ಉತ್ತಮ
ಜನವರಿ 22 ರಂದು ನಿಜವಾಗಿ ಶ್ರೀರಾಮನು ಅಯೋಧ್ಯೆಗೆ ಬರುತ್ತಿದ್ದಾನೆ. ಪ್ರಾಣ ಪ್ರತಿಷ್ಠೆಯ ದಿನದಂದು ನಾವು ಮಗುವಿಗೆ ಜನ್ಮ ನೀಡಿದ್ರೆ, ಆ ದೇವರು ನಮ್ಮ ಮನೆಗೂ ಬರುತ್ತಾನೆ ಅನ್ನೋ ನಂಬಿಕೆ ನಮ್ಮದು ಅಂತಾ ಓರ್ವ ಗರ್ಭಿಣಿ ಹೇಳ್ಕೊಂಡಿದ್ದಾರೆ. ಈ ದಿನ ಮಗು ಜನ್ಮ ತಾಳಿದ್ರೆ ಶಾಶ್ವತವಾಗಿ ಸ್ಮರಣೀಯವಾಗಿರುತ್ತೆ ಅನ್ನೋದು ಇನ್ನೋರ್ವ ಮಹಿಳೆಯ ಮಾತು. ಇಷ್ಟೇ ಅಲ್ಲದೇ ಈ ವಿಶೇಷ ಮತ್ತು ಮಂಗಳಕರ ದಿನದಂದು ಜನಿಸಿದ ಮಗುವು ಭಗವಾನ್ ಶ್ರೀರಾಮನಂತಹ ಗುಣಗಳು ಮತ್ತು ಮೌಲ್ಯಗಳನ್ನು ಹೊಂದಿರುತ್ತೆ ಅನ್ನೋ ಯೋಚನೆ ಹಲವರದ್ದು. ರಾಮನ ವಿಶೇಷ ದಿನದಲ್ಲಿ ಹುಟ್ಟಿದ ಮಗುವಿನ ಭವಿಷ್ಯವೂ ಅದ್ಭುತವಾಗಿರುತ್ತೆ ಅನ್ನೋದು ಹಲವರು ಪೋಷಕರ ಚಿಂತನೆ
ಒಟ್ನಲ್ಲಿ ರಾಮನಾಮ ಎಲ್ಲೆಲ್ಲೂ ಕಾಣಸಿಗ್ತಿದೆ. ಕಣ್ಣು ಬಿಡೋ ಮಗು ಕೂಡ ರಾಮನ ಮಾರ್ಗದಲ್ಲೇ ಸಾಗಬೇಕೆಂದು ಬಯಸ್ತಿದ್ದಾರೆ. ವೈದ್ಯರು ಮಾತ್ರ ಗರ್ಭಿಣಿಯರ ಆರೋಗ್ಯವನ್ನ ಗಮನದಲ್ಲಿಟ್ಟುಕೊಂಡು ಕೆಲವರಿಗಷ್ಟೇ ಸಿಸೇರಿಯನ್ ಮಾಡಲು ಸಿದ್ಧತೆ ಮಾಡಿಕೊಳ್ತಿದ್ದಾರೆ. ಅದೇನೇ ಇರಲಿ. ಇದೆಲ್ಲವೂ ರಾಮನ ಹಬ್ಬಕ್ಕೆ ಜನರು ಎಷ್ಟು ಕಾಯ್ತಿದ್ದಾರೆ ಅನ್ನೋದಕ್ಕೆ ಸಿಗ್ತಿರೋ ನಿದರ್ಶನಗಳು.


























