ಸಮುದ್ರದ ಮೇಲೆ ನಿರ್ಮಿಸಿರುವ ಭಾರತದ ಅತಿ ಉದ್ದದ ‘ಅಟಲ್ ಸೇತು’ ಇಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಸಮುದ್ರ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.
ಮುಂಬೈನ ಸೆವ್ರಿ- ರಾಯಗಡದ ನ್ಹಾವಾ ಶೇವಾ ಮಧ್ಯೆ ಸಂಪರ್ಕ ಕಲ್ಪಿಸಲು ಸುಮಾರು 21 ಕಿಲೋ ಮೀಟರ್ ಉದ್ದದ ಆರು ಪಥಗಳ ಬೃಹತ್ ಸೇತುವೆ ಇದಾಗಿದ್ದು, ಸುಮಾರು 18 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರತಿನಿತ್ಯ ಸುಮಾರು 70 ಸಾವಿರ ವಾಹನಗಳು ಸಂಚರಿಸುವ ನಿರೀಕ್ಷೆ ಇದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಅಟಲ್ ಸೇತುವೆ ಉದ್ಘಾಟನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸೇತುವೆಯನ್ನು ಪ್ರವೇಶಿಸುವ ಭಾಗದಲ್ಲಿ ಬಿಜೆಪಿಯ ಬಾವುಟಗಳು ಮತ್ತು ಪ್ರಧಾನಿ ಮೋದಿಯ ಬ್ಯಾನರ್ಗಳು ರಾರಾಜಿಸುತ್ತಿವೆ.
ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಸಮುದ್ರದ ಸೇತುವೆಗೆ ಅವರ ಹೆಸರನ್ನು ಇಡಲಾಗಿದೆ. ನಾಲ್ಕು ಚಕ್ರದ ವಾಹನಗಳ ವೇಗದ ಮಿತಿಯನ್ನು 100 ಕೀ.ಮಿ. ನಿಗದಿ ಮಾಡಲಾಗಿದೆ. ಹೀಗಾಗಿ ದೇಶದ ಅತಿ ಉದ್ಧದ ಸೇತುವೆ ಮೇಲೆ ಬೈಕ್, ಆಟೋ, ಟ್ರ್ಯಾಕ್ಟರ್, ಭಾರೀ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಸೇತುವೆಯ ಏಕಮುಖ ಸಂಚಾರಕ್ಕೆ 250 ರೂಪಾಯಿ, ದ್ವಿಮುಖ ಸಂಚಾರಕ್ಕೆ 375 ರೂಪಾಯಿ ಶುಲ್ಕ ಇರಲಿದೆ. ಒಂದು ವರ್ಷದ ಬಳಿಕ ರಾಜ್ಯ ಸರ್ಕಾರ, ಟೋಲ್ ದರವನ್ನು ಮರು ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.


























