ಬಂಟ್ವಾಳ : ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಮೇನಾಡುವಿನಲ್ಲಿ ಜ.11ರ ಮುಂಜಾನೆ ತಂಡವೊಂದು ತಾಯಿ-ಮಗಳಿಗೆ ಚಾಕು ತೋರಿಸಿ 3.20 ಲಕ್ಷ ರೂ. ಮೌಲ್ಯದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುವ ಜೊತೆಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಯು ಬಿ.ಸಿ.ರೋಡು-ಕಡೂರು ಹೆದ್ದಾರಿ ಬದಿಯಲ್ಲೇ ನಡೆದಿದ್ದು, ದರೋಡೆಕೋರರು ಹೆದ್ದಾರಿಯಲ್ಲೇ ಸಾಗಿದ್ದಾರೋ ಅಥವಾ ಒಳ ರಸ್ತೆಗಳನ್ನು ಬಳಸಿ ಪರಾರಿಯಾಗಿದ್ದಾರೋ ಎಂಬುದರ ಕುರಿತು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಒಂದು ವೇಳೆ ಹೆದ್ದಾರಿಯಲ್ಲೇ ಪರಾರಿ ಆಗಿದ್ದರೆ ಘಟನೆಯು ಮುಂಜಾನೆಯ ವೇಳೆ ನಡೆದಿರುವುದರಿಂದ ಆ ವೇಳೆ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದು, ಕಳ್ಳರ ಪತ್ತೆಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಜೊತೆಗೆ ಸ್ಥಳೀಯರಿಂದ ಈ ಕುರಿತು ಮಾಹಿತಿಯನ್ನೂ ಕಲೆ ಹಾಕುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.
ದರೋಡೆಕೋರರನ್ನು ಶೀಘ್ರ ಬಂಧಿಸುವ ಕುರಿತು ಪೊಲೀಸ್ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

























