ಉಪ್ಪಿನಂಗಡಿ : ಯಾವುದೇ ಪರವಾನಿಗೆ ಇಲ್ಲದೆ ಹೊಳೆಯಿಂದ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಾಹನ ಸಹಿತ ಪೊಲೀಸರು ವಶಕ್ಕೆ ಪಡಿಸಿದ ಘಟನೆ ಇಚಿಲಂಪಾಡಿಯ ಪೆರಿಯಶಾಂತಿ ಎಂಬಲ್ಲಿ ನಡೆದಿದೆ.
ನೆಲ್ಯಾಡಿ ನಿವಾಸಿ ಸಿಬು ಜಾನ್ ಬಂಧಿತ.
ಜ.16 ರಂದು ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಪೆರಿಯ ಶಾಂತಿ ಎಂಬಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೇ, ಹೊಳೆಯಿಂದ ಮರಳನ್ನು ಕಳವು ಮಾಡಿ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದುದನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಜೇಶ ಕೆ ವಿ ರವರು ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿರುತ್ತಾರೆ.
ಈ ವೇಳೆ ವಾಹನವನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಹಿಡಿದು ವಿಚಾರಿಸಿ, ಮುಂದಿನ ಕಾನೂನುಕ್ರಮಕ್ಕಾಗಿ ಆರೋಪಿಯನ್ನು, ಕೃತ್ಯಕ್ಕೆ ಬಳಸಿದ ಪಿಕಪ್ ವಾಹನವನ್ನು ಹಾಗೂ ವಾಹನದಲ್ಲಿದ್ದ ಅಂದಾಜು 50 ಬುಟ್ಟಿಗಳಷ್ಟು ಮರಳನ್ನು ವಶಕ್ಕೆ ಪಡೆದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 10/.2024 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























