ಉಪ್ಪಿನಂಗಡಿ : ನಕಲಿ ಚಿನ್ನಾಭರಣ ಅಡವಿಟ್ಟು ಲಕ್ಷಾಂತರ ರೂ. ವಂಚನೆ ಮಾಡಿರುವ ಕುರಿತು ನೀಡಿರುವ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಸಂಘ ಉಪ್ಪಿನಂಗಡಿ ಶಾಖೆಯ ವ್ಯವಸ್ಥಾಪಕರು ನೀಡಿರುವ ದೂರಿನ ಮೇರೆಗೆ ಸೆಬಾಸ್ಟಿಯನ್ ಮತ್ತು ಡಾನಿಶ್ ಹಾಗೂ ಸಂಘದ ಸರಾಫ ಶ್ರೀಧರ ಆಚಾರ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
ಜ.31 ರಂದು ಮಧ್ಯಾಹ್ನ ಸೆಬಾಸ್ಟಿಯನ್ ಮತ್ತು ಡಾನಿಶ್ ಎಂಬವರು ಸದ್ರಿ ಸಹಕಾರಿ ಸಂಘಕ್ಕೆ ಬಂದು, ಮೇಲ್ನೋಟಕ್ಕೆ ನಕಲಿಯೆಂದು ಕಂಡುಬಾರದಂತಹ ಒಟ್ಟು 40 ಗ್ರಾಂ ತೂಕದ 5 ನಕಲಿ ಬಳೆಗಳನ್ನು ಅಡಮಾನವಿರಿಸಿರುತ್ತಾರೆ ಹಾಗೂ ಸದ್ರಿ ಚಿನ್ನಾಭರಣಗಳ ನೈಜತೆಯನ್ನು ಸಂಘದ ಸರಾಫರಾದ ಶ್ರೀಧರ ಆಚಾರ್ಯ ರವರು ಪರಿಶೀಲಿಸಿರುತ್ತಾರೆ. ಆರೋಪಿಗಳು ಸದ್ರಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿರಿಸಿ ರೂ 1,70,000/- ವನ್ನು ಪಡೆದು ಸಂಸ್ಥೆಗೆ ಮೋಸ ಮಾಡಿರುತ್ತಾರೆ.
ಸಂಘದ ಸರಾಫ ಶ್ರೀಧರ ಆಚಾರ್ಯರವರು ಸದ್ರಿ ನಕಲಿ ಚಿನ್ನಾಭರಣಗಳನ್ನು ಪರಿಶೀಲಿಸಿ ನೈಜ ಚಿನ್ನ ಎಂದು ಸುಳ್ಳು ಹೇಳಿ ನಂಬಿಕೆ ದ್ರೋಹ ಎಸಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 17/2024 ಕಲಂ: 406,409.420, ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























