ಪುತ್ತೂರು : ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಿಂದ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯದ ಗಮನ ಸೆಳೆದಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಸೇರ್ಪಡೆಗೆ ಬಿಜೆಪಿ ಗಡುವು ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ಆದಷ್ಟು ಬೇಗ ನಿರ್ಧಾರ ತಿಳಿಸುವಂತೆ ಗಡುವು ವಿಧಿಸಿರುವುದರ ಜೊತೆಗೆ ಕೆಲವೊಂದು ಷರತ್ತುಗಳನ್ನೂ ಪುತ್ತಿಲ ಆವರಿಗೆ ಬಿಜೆಪಿ ನಾಯಕರು ಒಡ್ಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು (ಸೋಮವಾರ) ಅರುಣ್ ಪುತ್ತಿಲ ಸಮಾಲೋಚನಾ ಸಭೆ ಕರೆದಿದ್ದಾರೆ. ವಿಧಾನಸಭೆ ಚುನಾವಣೆಯ ನಂತರ ಅವರು ಹುಟ್ಟುಹಾಕಿರುವ ಪುತ್ತಿಲ ಪರಿವಾರದ ಸಭೆ ನಡೆಯಲಿದ್ದು, ಅಂತಿಮ ತೀರ್ಮಾನದ ಬಗ್ಗೆ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಯಲಿದೆ.
ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಮಾರ್ತ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪುತ್ತಿಲ ಅಭಿಮಾನಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದುವರೆಯಲು ಪುತ್ತಿಲ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಮತ್ತು ಆರ್ ಎಸ್ಎಸ್ ಜೊತೆಗಿನ ಹಲವು ಸುತ್ತಿನ ಮಾತುಕತೆಯ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಬಿಜೆಪಿ ವಿಧಿಸಿರುವ ಷರತ್ತೇನು..!?
ಪುತ್ತಿಲ ಪರಿವಾರವನ್ನು ವಿಸರ್ಜಿಸಿದರೆ ಮಾತ್ರ ಬಿಜೆಪಿಗೆ ಬನ್ನಿ ಎಂದು ಕೆಲವು ಬಿಜೆಪಿ ನಾಯಕರು ಷರತ್ತು ಒಡ್ಡಿದ್ದಾರೆ ಎಂದೂ ಮೂಲಗಳು ಹೇಳಿವೆ. ಆದರೆ, ಪುತ್ತಿಲ ಪರಿವಾರವನ್ನು ಅರುಣ್ ಪುತ್ತಿಲ ವಿಸರ್ಜನೆ ಮಾಡುತ್ತಾರೆಯೇ ಎಂಬುದೇ ಸದ್ಯದ ಕುತೂಹಲವಾಗಿದೆ.
ಈ ಮಧ್ಯೆ, ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ಅವರ ಅಭಿಮಾನಿಗಳಲ್ಲೇ ಭಿನ್ನಾಭಿಪ್ರಾಯ ಇದೆ. ಪಕ್ಷ ಸೇರ್ಪಡೆ ಬೇಡ, ಲೋಕಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸರ್ಧಿಸಿ ಎಂಬ ಒತ್ತಡ ಹಲವರಿಂದ ವ್ಯಕ್ತವಾಗಿದೆ. ಇನ್ನು ಕೆಲವರು ಬಿಜೆಪಿ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಪುತ್ತಿಲ ಪರಿವಾರ ವಿಸರ್ಜನೆ ಬಗ್ಗೆಯೂ ಸಮಾಲೋಚನಾ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಬಿಜೆಪಿಗೆ ಸಡ್ಡು ಹೊಡೆದು ಅರಂಭಗೊಂಡಿದ್ದ ಪುತ್ತಿಲ ಪರಿವಾರ ಮತ್ತು ಅದರ ಮುಖಂಡರಿಂದ ನಿರಂತರವಾಗಿ ಬಿಜೆಪಿ ವಿರುದ್ಧ ಚಟುವಟಿಕೆ ನಡೆಯುತ್ತಿದೆ ಎಂದು ಬಿಜೆಪಿಯ ಹಲವು ನಾಯಕರು ಆರೋಪಿಸಿದ್ದಾರೆ. ಹೀಗಾಗಿ ಬಿಜೆಪಿಗೆ ವಿರುದ್ಧವಾಗಿ ಆರಂಭಿಸಿರುವ ಪುತ್ತಿಲ ಪರಿವಾರ ವಿಸರ್ಜಿಸಿ ಬರುವಂತೆ ಷರತ್ತು ವಿಧಿಸಲಾಗಿದೆ ಎನ್ನಲಾಗಿದೆ.
ಸದ್ಯ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಪುತ್ತಿಲ ಪರಿವಾರದ ನಡೆ ದಕ್ಷಿಣ ಕನ್ನಡ ಜಿಲ್ಲಾ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.


























